ಪುತ್ತೂರು ಮಾರ್ಚ್ 14: ಸೂರ್ಯರಶ್ಮಿಯ ಕ್ಷೇತ್ರ ಎಂದೇ ಖ್ಯಾತಿಯಾಗಿರುವ ಪುತ್ತೂರಿನ ರೈಲು ನಿಲ್ದಾಣದ ಸಮೀಪದ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಇಂದು (ಮಾರ್ಚ್ 14) ಮೀನ ಸಂಕ್ರಮಣದ ಪುಣ್ಯಕಾಲದಲ್ಲಿ ಸೂರ್ಯನ ಕಿರಣಗಳು ದೇವಿಯ ಬಿಂಬವನ್ನು ಸ್ಪರ್ಶಿಸಿವೆ.

ವರ್ಷದ ಕೊನೆಯ ಮಾಸವಾದ ಮೀನ ಸಂಕ್ರಮಣದಂದು ಸೂರ್ಯನು ತನ್ನ ಪಥ ಬದಲಿಸುವ ಈ ಸಂದರ್ಭದಲ್ಲಿ, ಮುಂಜಾನೆಯ ಸೂರ್ಯಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ನೇರವಾಗಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ಮಹಾಲಕ್ಷ್ಮೀ ದೇವಿಯ ವಿಗ್ರಹವನ್ನು ಸ್ಪರ್ಶಿಸಿದವು. ರಾಜ್ಯದಲ್ಲಿ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯಕಿರಣಗಳು ದೇವಿಯ ಬಿಂಬವನ್ನು ಸ್ಪರ್ಶಿಸುವ ಏಕೈಕ ದೇವಸ್ಥಾನ ಇದಾಗಿದೆ ಎಂಬ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ.

ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದಂದು ಸಂಜೆ ಸೂರ್ಯರಶ್ಮಿ ಸ್ಪರ್ಶವಾದರೆ, ಇಲ್ಲಿ ಮೀನ ಸಂಕ್ರಮಣದ ಮುಂಜಾನೆ ಈ ಪವಾಡ ಸಂಭವಿಸುತ್ತದೆ.
ಈ ಪವಿತ್ರ ಕ್ಷಣದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ವೇದಘೋಷಗಳು ಮೊಳಗಿದವು. ನೂರಾರು ಭಕ್ತಾದಿಗಳು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಂಡು ಪುನೀತರಾದರು. ಪ್ರಸ್ತುತ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಅದ್ಧೂರಿ ಬ್ರಹ್ಮಕಲಶೋತ್ಸವ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.