ಪುತ್ತೂರು ಎಪ್ರಿಲ್ 01: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಪ್ರಯುಕ್ತ ಕ್ಷೇತ್ರದಲ್ಲಿ ಎಪ್ರಿಲ್ 1 ರಂದು ಗೊನೆ ಮುಹೂರ್ತ ನೆರವೇರಿದೆ.

ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಬೆಳಗ್ಗೆ 9.15 ರ ಶುಭ ಮುಹೂರ್ತದಲ್ಲಿ ಗೊನೆ ಮುಹೂರ್ತ ನೆರವೇರಿಸಲಾಗಿದೆ.ಗೊನೆ ಮುಹೂರ್ತ ನೆರವೇರುವ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಸಮಿತಿಯ ಎಲ್ಲಾ ಸದಸ್ಯರು, ಭಕ್ತರು ಉಪಸ್ಥಿತರಿದ್ದು, ಕ್ಷೇತ್ರದ ಅರ್ಚಕರು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಗೊನೆ ಮುಹೂರ್ತ ನೆರವೇರಿಸಿದರು.

ಬಹುತೇಕ ಎಲ್ಲಾ ದೇವಸ್ಥಾನ, ದೈವಸ್ಥಾನಗಳಲ್ಲಿ ನಡೆಯುವ ಜಾತ್ರೋತ್ಸವದ ಸಂದರ್ಭದಲ್ಲಿ ಈ ಗೊನೆ ಮುಹೂರ್ತವನ್ನು ನೆರವೇರಿಸಲಾಗುತ್ತದೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 1 ರಂದು ಗೊನೆ ಮುಹೂರ್ತ ನೆರವೇರಿದ ಬಳಿಕ ಎಪ್ರಿಲ್ 10 ರಂದು ಧ್ವಜಾರೋಹಣ ನೆರವೇರಲಿದೆ. ಎಪ್ರಿಲ್ 17 ರಂದು ಮಹಾಲಿಂಗೇಶ್ವರ ದೇವರ ರಥೋತ್ಸವ ನಡೆಯಲಿದೆ. ಗೊನೆ ಮುಹೂರ್ತ ನೆರವೇರಿದ ಬಳಿಕ ಕ್ಷೇತ್ರದ ಸೀಮೆಗೆ ಬರುವ ಪ್ರದೇಶಗಳ ಜನ ತಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ತರುತ್ತಾರೆ. ಗೊನೆ ಮುಹೂರ್ತ ನೆರವೇರಿದ ಬಳಿಕ ಕ್ಷೇತ್ರದ ವ್ಯಾಪ್ತಿಗೆ ಬರುವ ಮಾಂಸಾಹಾರವನ್ನು ಸಂಪೂರ್ಣ ನಿಲ್ಲಿಸುತ್ತಾರೆ. ರಥೋತ್ಸವ ನೆರವೇರುವ ಬಳಿಕ ಪುತ್ತೂರಿನ ಜನತೆ ಪಥ್ಯವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ.
ಗಮನಿಸಬೇಕಾದ ಅಂಶವೆಂದರೆ ದೈವ-ದೇವಸ್ಥಾನಗಳಲ್ಲಿ ನಡೆಯುವ ಗೊನೆ ಮುಹೂರ್ತಕ್ಕೆ ಬಳಸಲಾಗುವ ಬಾಳೆ ಮರಕ್ಕೂ ವಿಶೇಷತೆಯಿದ್ದು, ಎಲ್ಲಾ ಗಿಡಗಳಲ್ಲಿ ಇರುವ ಬಾಳೆ ಗೊನೆಯನ್ನು ಬಳಸಲಾಗುವುದಿಲ್ಲ. ಪೂರ್ವಾಭಿಮುಖವಾಗಿ ಮುಖ ಮಾಡಿ ಗೊನೆ ಹಾಕಿದ ಬಾಳೆ ಗಿಡದಿಂದಲೇ ಗೊನೆ ಕಡಿಯಬೇಕೆಂಬ ಸಂಪ್ರದಾಯವೂ ಇದೆ. ಇದಕ್ಕಾಗಿ ಕ್ಷೇತ್ರದ ವತಿಯಿಂದ ಗೊನೆ ಮುಹೂರ್ತಕ್ಕಾಗಿ ಬೇಕಾದ ಬಾಳೆಗಿಡವನ್ನು ಹುಡುಕಾಟ ನೆಡೆಸಲಾಗುತ್ತದೆ. ಕ್ಷೇತ್ರದ ಸುತ್ತಮುತ್ತ ಪೂರ್ವಾಛಿಮುಖವಾಗಿ ಇರುವ ಬಾಳೆಗಿಡಗಳನ್ನು ಹುಡುಕಿ ಆಯ್ಕೆ ಮಾಡಲಾಗುತ್ತದೆ. ಆ ಬಳಿಕ ತೋಟದ ಮಾಲಕರನ್ನು ಸಂಪರ್ಕಿಸಿ ಗೊನೆ ಮುಹೂರ್ತಕ್ಕೆ ಬೇಕಾದ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳನ್ನು ಬಾಳೆಗಿಡದ ಬಳಿಯೇ ನೆರವೇರಿಸಿದ ಬಳಿಕ ಗೊನೆ ಕಡಿಯಲಾಗುತ್ತದೆ. ಗೊನೆ ಮುಹೂರ್ತಕ್ಕೆ ತೆರಳುವ ಮತ್ತು ಗೊನೆಯನ್ನು ಕಡಿದು ವಾಪಾಸು ಕ್ಷೇತ್ರಕ್ಕೆ ತರುವ ಸಂದರ್ಭದಲ್ಲಿ ವಾದ್ಯಘೋಷಗಳೊಂದಿಗೆ ತೆರಳಲಾಗುತ್ತದೆ. ಕ್ಷೇತ್ರಕ್ಕೆ ತಂದು ಬಾಳೆ ಗೊನೆಯನ್ನು ಗರ್ಭಗುಡಿಯ ಒಳಗಡೆ ಕಟ್ಟಲಾಗುತ್ತಿದ್ದು, ಧ್ವಜಾರೋಹಣದ ಸಮಯದಲ್ಲಿ ಆ ಗೊನೆ ಹಣ್ಣಾಗುತ್ತದೆ.