ಪುತ್ತೂರು ಎಪ್ರಿಲ್ 23: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ ಖಾಸಗಿ ಕಾಲೇಜು ವಿದ್ಯಾರ್ಥಿ ಆದಿಲ್ ಎಂಬವರ ಮೇಲೆ ಐದಾರು ಜನರ ತಂಡವೊಂದು ಬರ್ಬರವಾಗಿ ಹಲ್ಲೆ ನಡೆಸಿದೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್ 22ರಂದು ಸಂಜೆ ಆದಿಲ್ ತನ್ನ ಸ್ನೇಹಿತರೊಂದಿಗೆ ಚಹಾ ಕುಡಿಯುತ್ತಿದ್ದಾಗ ಸ್ಥಳಕ್ಕೆ ಬಂದ ಬಿ.ಕೆ. ಮೊಯಿನುದ್ದೀನ್, ಮೋಹದ್ ಹಾಗೂ ಇತರ ಐವರು ಏಕಾಏಕಿ ದಾಳಿ ನಡೆಸಿದ್ದಾರೆ. ಹಲ್ಲೆಯನ್ನು ತಡೆಯಲು ಬಂದ ಆದಿಲ್ ಸ್ನೇಹಿತರಿಗೂ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕರು ಜಮಾಯಿಸುತ್ತಿದ್ದಂತೆ, ಆರೋಪಿಗಳು ಆದಿಲ್ಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ.
ಕೆಲವು ತಿಂಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆದಿದ್ದ ಗಲಾಟೆಯನ್ನು ಆದಿಲ್ ಮಧ್ಯಪ್ರವೇಶಿಸಿ ಬಿಡಿಸಿದ್ದರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಮೊಯಿನುದ್ದೀನ್ ಮತ್ತು ತಂಡ ಈ ದಾಳಿ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಾಳು ಆದಿಲ್ ಸದ್ಯ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.