ಪುತ್ತೂರು ಡಿಸೆಂಬರ್ 16: ಪುತ್ತೂರು ನಗರಸಭಾ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚಲು ಪುತ್ತೂರು ನಗರ ಸಭೆಯು ಸುಮಾರು 41 ಲಕ್ಷ ರೂಪಾಯಿಗಳ ಕಾಮಗಾರಿ ನಡೆಸಲು ಟೆಂಡರ್ ಕರೆದಿದ್ದರೂ, ಶಾಸಕರು ತಮ್ಮ ಆಪ್ತನಿಗೇ ಕಾಮಗಾರಿ ನಿರ್ವಹಿಸಲು ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಒತ್ತಡ ಹೇರಿರೋದು ಕಾನೂನಿಗೆ ವಿರುದ್ಧವಾಗಿದೆ ಎಂದು ಪುತ್ತೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಆರೋಪಿಸಿದ್ದಾರೆ.


ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಆಡಳಿತದ ನಗರಸಭೆ ರಸ್ತೆಗಳ ಗುಂಡಿ ಮುಚ್ಚಲು 41 ಲಕ್ಷ ರೂಪಾಯಿ ಕಾಮಗಾರಿಯ ಟೆಂಡರ್ ಕರೆದಿತ್ತು. E ಟೆಂಡರ್ ಪ್ರಕ್ರಿಯೆಯ ಮೂಲಕ ಟೆಂಟರ್ ಕರೆಯಲಾಗಿತ್ತು. ಆದರೆ ಶಾಸಕರು ತಮ್ಮ ಆಪ್ತನಿಗೇ ಆ ಕಾಮಗಾರಿಗಳನ್ನು ನೀಡಬೇಕೆಂದು ಪುತ್ತೂರು ಕಮಿಷನರ್ ಗೆ ಕರೆ ಮಾಡಿ ಒತ್ತಡ ಹಾಕುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಕಾನೂನು ಪ್ರಕಾರ ನಡೆಯುವ ಈ ಪ್ರಕ್ರಿಯೆಗೆ ಮೂಗು ತೂರಿಸುವ ಕೆಲಸವನ್ನು ಶಾಸಕರು ಮಾಡಿದ್ದು, ಆ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಪ್ರತೀ ಬಾರಿಯೂ ಪುತ್ತೂರು ಕ್ಷೇತ್ರಕ್ಕೆ 2000 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎನ್ನುವ ಶಾಸಕರಿಗೆ ತನ್ನ ಅನುದಾನದಲ್ಲೇ ಈ ಕಾಮಗಾರಿಯನ್ನು ಯಾಕೆ ನಡೆಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು ಬಿಜೆಪಿ ಆಡಳಿತ ಬಿಡುಗಡೆ ಮಾಡಿದ ಅನುದಾನವನ್ನು ತಮ್ಮದೆಂದು ಬಿಂಬಿಸಿ ಪೋಸ್ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾಮಗಾರಿಗಳ ಟೆಂಡರ್ ಇನ್ನೂ ಓಪನ್ ಆಗದೆ ಇದ್ದರೂ ತಮ್ಮ ಅನುಯಾಯಿಗಳಿಗೆ ಕಾಮಗಾರಿ ನೀಡಿರುವ ಶಾಸಕರು ಮುಂದೆ ಟೆಂಡರ್ ಬೇರೆಯವರಿಗೆ ಆದಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು ಸದ್ಯ ನಗರಸಭೆಯ ಆಡಳಿತಾಧಿಕಾರಿಯಾಗಿರುವ ದ.ಕ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದೂ ಆಗ್ರಹಿಸಿದ್ದಾರೆ.

Share Information