ಪುತ್ತೂರು ನವೆಂಬರ್ 27: ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮಧ್ಯೆ ಮತ್ತೆ ಬಿರುಕು ಬಿಟ್ಟಿದ್ದು, ಈ ಬಿರುಕು ಇದೀಗ ಬಹಿರಂಗವಾಗತೊಡಗಿದೆ. ಪುತ್ತಿಲ ಪರಿವಾರದ ಕೆಲವು ಮುಖಂಡರಿಗೆ ಈ ಹಿಂದೆ ಬಿಜೆಪಿಯಲ್ಲಿ ಸ್ಥಾನಮಾನವನ್ನು ನೀಡಲಾಗಿತ್ತು. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ರೆಬೆಲ್ ಆಗಿ ನಿಂತು ಬಿಜೆಪಿ ಸೋಲಿಗೆ ಕಾರಣವಾಗಿದ್ದ ಅರುಣ್ ಕುಮಾರ್ ಪುತ್ತಿಲರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವನ್ನು ನೀಡಿರಲಿಲ್ಲ. ಇದರಿಂದ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದವರು ಪಕ್ಷದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.


ಈ ನಡುವೆ ಅರುಣ್ ಕುಮಾರ್ ಪುತ್ತಿಲ ತಮಗೆ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲವನ್ನು ಒಟ್ಟು ಸೇರಿಸಿ ಅಧ್ಯಕ್ಷನನ್ನಾಗಿ ಮಾಡಬೇಕೆಂದು ಮಾಧ್ಯಮಗಳ ಮೂಲಕ ಬಿಜೆಪಿಗೆ ಒತ್ತಾಯಿಸಿದ್ದರು. ಆ ಬಳಿಕ ಬಿಜೆಪಿ ಮತ್ತು ಪರಿವಾರದ ಮಧ್ಯೆ ಬಿರುಕು ಮತ್ತಷ್ಟು ಹೆಚ್ಚಿದ್ದವು. ಅಲ್ಲದೆ ಮುಂದಿನ ಚುನಾವಣೆಯಲ್ಲೂ ಪಕ್ಷೇತರನಾಗಿ ಸ್ಪರ್ಧಿಸುವ ಮುನ್ಸೂಚನೆಯನ್ನೂ ಅರುಣ್ ಕುಮಾರ್ ಪುತ್ತಿಲ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಬಿಜೆಪಿಯಲ್ಲಿ ಸ್ಥಾನಮಾನ ಪಡೆದಿದ್ದ ಮೂವರಿಗೆ ಪಕ್ಷದ ಹುದ್ದೆಯಿಂದ ಕೋಕ್ ನೀಡಲಾಗಿದೆ.

ಉಮೇಧ್ ಕೋಡಿಬೈಲು, ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲ್ಲಾಡಿಯವರ ಸ್ಥಾನಕ್ಕೆ ಹೊಸಬರನ್ನು ಸೇರಿಸಲಾಗಿದೆ. ಈ ಬೆಳವಣಿಗೆಯ ನಡುವೆ ಪುತ್ತಿಲ ಪರಿವಾರದ ಸೇವಾ ಟ್ರಸ್ಟ್ ಗೆ ಬಿಜೆಪಿಯ ಹುದ್ದೆಯಿಂದ ಬಿಡುಗಡೆಹೊಂದಿದ ಮೂವರನ್ನೂ ಕಾರ್ಯದರ್ಶಿಗಳಾಗಿ ನೇಮಕ ಮಾಡುವ ಮೂಲಕ ಕೌಂಟರ್ ನೀಡಿದೆ. ನವೆಂಬರ್ 29 ಮತ್ತು 30 ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು, ಆ ಬಳಿಕ ಮತ್ತೆ ಹಲವು ಬದಲಾವಣೆಗಳಾಗುವ ಸಾಧ್ಯತೆಗಳು ದಟ್ಟವಾಗಿದೆ. ಈಗಾಗಲೇ ಇಬ್ಬರು ಬಿಜೆಪಿ ಯುವಮೋರ್ಚಾ ಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪರ್ವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ‌

Share Information