ಅಮೃತಸರ ಫೆಬ್ರವರಿ 18: ಮದುವೆ ಸಮಾರಂಭವೊಂದರಲ್ಲಿ ವಧುವಿನ ಮೇಲೆ ಹಣದ ಮಳೆ ಸುರಿಸಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜಾಬ್ನ ತರ್ನ್ ತರನ್ನಲ್ಲಿ ಫೆಬ್ರವರಿ 14 ರಂದು ಈ ಮದುವೆ ನಡೆದಿದ್ದು, ಸದ್ಯ ವೈರಲ್ ಆಗಿರುವ ಸುದ್ದಿಯ ಪ್ರಕಾರ ವಧುವಿನ ಮೇಲೆ 8.5 ಕೋಟಿ ರೂಪಾಯಿ ಹಣದ ಮಳೆ ಸುರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಆರೋಪವನ್ನು ವರನ ಕುಟುಂಬ ನಿರಾಕರಿಸಿದೆ.

ವೈರಲ್ ಆಗಿಕರುವ ವಿಡಿಯೋದಲ್ಲಿ ವಧುವಿನ ಮೇಲೆ ನೋಟುಗಳ ಮಳೆ ಸುರಿಸುತ್ತಿರುವುದನ್ನು ತೋರಿಸುತ್ತದೆ. ನೋಟುಗಳನ್ನು ಸುರಿಸುವುದು ಪಂಜಾಬಿ ವಿವಾಹಗಳಲ್ಲಿ ಒಂದು ವಾಡಿಕೆಯಾಗಿದೆ. ಅತಿಥಿಗಳು ಸಂಗೀತಕ್ಕೆ ನೃತ್ಯ ಮಾಡುವುದನ್ನು ಸಹ ಈ ವಿಡಿಯೋದಲ್ಲಿ ಕಾಣಬಹುದು, ನೆಲವು ಸಂಪೂರ್ಣವಾಗಿ ನೋಟುಗಳಿಂದ ಮುಚ್ಚಲ್ಪಟ್ಟಿದೆ, ಇತರರು ಹಣವನ್ನು ಗಾಳಿಯಲ್ಲಿ ಎಸೆಯುತ್ತಿದ್ದಾರೆ.
ವರನ ಸಹೋದರ ಸಿಕಂದರ್ ಸಿಂಗ್ ವೈರಲ್ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ್ದು, ಸಂಭ್ರಮಾಚರಣೆಯ ಸಮಯದಲ್ಲಿ ಹಣದ ಸುರಿಮಳೆಯಾಗಿದ್ದು ಹೌದು, ಆನ್ಲೈನ್ನಲ್ಲಿ ಪ್ರಸಾರವಾಗುವ ಅಂಕಿಅಂಶಗಳಿಗೆ ಅದು ಹತ್ತಿರವೂ ಇಲ್ಲ.ನನ್ನ ಸಹೋದರ ಆಸ್ಟ್ರೇಲಿಯದಲ್ಲಿ ಟ್ರಕ್ ವ್ಯವಹಾರ ನಡೆಸುತ್ತಿದ್ದಾನೆ. ಫೆಬ್ರವರಿ 14 ರಂದು ಮದುವೆ ಆಗಿತ್ತು. ನಾವು ಹಣದ ಸುರಿಮಳೆಗೈದು ಆಚರಿಸಿದೆವು, ಆದರೆ ಅದು 4 ಲಕ್ಷ ರೂ. ಮಾತ್ರ. ಸಾಮಾಜಿಕ ಮಾಧ್ಯಮವು ಅದನ್ನು ಕೋಟಿಗಳಲ್ಲಿ ಉತ್ಪ್ರೇಕ್ಷಿಸಿದೆ, ಅದು ತಪ್ಪು, ”ಎಂದು ಹೇಳಿದ್ದಾರೆ.