KARNATAKA
ಶಿವಮೊಗ್ಗ – ತರಗತಿ ಬಾಗಿಲಲ್ಲೇ ಕುಸಿದು ಬಿದ್ದು ಸಾವನಪ್ಪಿದ ಪಿಯುಸಿ ವಿಧ್ಯಾರ್ಥಿನಿ
ಶಿವಮೊಗ್ಗ ಡಿಸೆಂಬರ್ 18: ಪಿಯುಸಿ ವಿಧ್ಯಾರ್ಥಿನಿಯೊಬ್ಬಳು ತರಗತಿ ಬಾಗಿಲಲ್ಲೇ ಕುಸಿದು ಬಿದ್ದು ಸಾವನಪ್ಪಿದ ಘಟನೆ ಶಿವಮೊಗ್ಗದ ನಂಜಪ್ಪ ಲೇಔಟ್ ನಲ್ಲಿರುವ ಇಂಟೀರಿಯಲ್ ಪಿಯು ಕಾಲೇಜಿನಲ್ಲಿ ನಡೆದಿದೆ.
ಮೃತ ವಿಧ್ಯಾರ್ಥಿನಿಯನ್ನು ಇಂಟೀರಿಯಲ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮುಭಾಶಿರ ಬಾನು (17) ಎಂದು ಗುರುತಿಸಲಾಗಿದೆ.
ಶಿವಮೊಗ್ಗದ ನಂಜಪ್ಪ ಲೇಔಟ್ ಬಳಿ ಇರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯು ಪ್ರಜ್ಞೆ ತಪ್ಪಿ ಹಿಮ್ಮುಖವಾಗಿ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಾಂಶುಪಾಲ ಕೋಣೆಯಿಂದ ಮುಂದೆ ಸಾಗಿ ತನ್ನ ತರಗತಿ ಕೋಣೆಯೊಳಗೆ ನಡೆದುಕೊಂಡು ಹೋಗುವಾಗ ಹಿಂದಕ್ಕೆ ಕುಸಿದು ಬಿದ್ದಿದ್ದಾಳೆ. ಇತರೆ ವಿದ್ಯಾರ್ಥಿಗಳು ಆಕೆಯನ್ನು ಹಿಡಿದುಕೊಳ್ಳಲು ಯತ್ನಿಸಿದರೂ ಸಾಧ್ಯವಾಗದೇ ನೆಲಕ್ಕೆ ಬಿದ್ದಿದ್ದಾಳೆ. ಕೂಡಲೇ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮುನ್ನವೇ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಕಾಲೇಜಿಗೆ ಹೋದ ನಂತರ ಪ್ರಾಂಶುಪಾಲರ ಚೇಂಬರ್ ಬಳಿ ನಡೆದು ಹೋಗಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.