ಶಿವಮೊಗ್ಗ,ಮಾರ್ಚ್ 21: ಇರಾನ್ ಮತ್ತು ಅಮೇರಿಕಾದ ನಡುವಿನ ಯುದ್ದ ಹಿನ್ನಲೆ ಇಂಧನ ಅಭಾವ ಸೃಷ್ಟಿಯಾಗಲಿದೆ ಎಂಬ ವದಂತಿ ಶಿವಮೊಗ್ಗ ಜಿಲ್ಲೆಯಾದ್ಯಂತ ಹರಡಿದೆ. ಇದರ ನೇರ ಪರಿಣಾಮವಾಗಿ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪಟ್ಟಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಜನರು ಮುಗಿಬಿದ್ದ ಘಟನೆ ನಡೆದಿದೆ.

ಪಟ್ಟಣದ ಮೂರು ಪ್ರಮುಖ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಸ್ಟಾಕ್ ಮುಗಿದಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತು. ಈ ವದಂತಿಯ ಬೆನ್ನಲ್ಲೇ, ಇಂಧನ ಲಭ್ಯವಿದ್ದ ಹೆಚ್.ಪಿ. ಪೆಟ್ರೋಲ್ ಬಂಕ್ಗೆ ನೂರಾರು ವಾಹನ ಸವಾರರು ಏಕಕಾಲಕ್ಕೆ ಧಾವಿಸಿದರು. ಕೇವಲ ವಾಹನಗಳಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಜನರು ಖಾಲಿ ಬಾಟಲಿ ಹಾಗೂ ಕ್ಯಾನ್ಗಳನ್ನು ಹಿಡಿದು ಸಾಲಿನಲ್ಲಿ ನಿಂತು ಇಂಧನ ಭರ್ತಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು. ವದಂತಿಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಬಂಕ್ ಮಾಲೀಕರು, “ಸದ್ಯಕ್ಕೆ ಇಂಧನ ಕೊರತೆಯಿಲ್ಲ ಮತ್ತು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ,” ಎಂದು ಸ್ಪಷ್ಟನೆ ನೀಡುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು.