ಸಿಎಎ, ಎನ್.ಆರ್.ಸಿ ಹೋರಾಟದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನೂ ಎಳೆದು ತಂದ ಪ್ರತಿಭಟನಾಕಾರರು

ಮಂಗಳೂರು, ಜನವರಿ 11: ದೇಶದಾದ್ಯಂತ ಎನ್.ಆರ್.ಸಿ, ಸಿಎಎ ಕಾನೂನು ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೇಂದ್ರ ಸರಕಾರ, ಬಿಜೆಪಿ ಹಾಗೂ ಆರ್.ಎಸ್.ಎಸ್ ವಿರುದ್ಧ ಎರಗುತ್ತಿದ್ದ ಪ್ರತಿಭಟನಾಕಾರರು ಇದೀಗ ದೇಶದ ಉಚ್ಛ ನ್ಯಾಯಾಲಯದ ವಿರುದ್ಧವೂ ತಿರುಗಿ ಬಿದ್ದಿದ್ದಾರೆ.


ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ವ್ಯುಮೆನ್ಸ್ ಮೂಮೆಂಟ್ ಇಂಡಿಯಾ ನೇತೃತ್ವದಲ್ಲಿ ಸಿಎಎ, ಎನ್.ಆರ್.ಸಿ ವಿರೋಧಿ ಪ್ರತಿಭಟನೆಯಲ್ಲಿ ಸುಪ್ರೀಂಕೋರ್ಟ್ ನ ನಡೆಯನ್ನೂ ಪ್ರಶ್ನಿಸಲಾಗಿದೆ.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ಇಂದು ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಬಿಕರಿಯಾಗಿದೆ ಎಂದು ಆರೋಪಿಸಿದರು.

ಕಾನೂನನ್ನು ವಿರೋಧಿಸಿ ದೇಶದೆಲ್ಲಡೆ ಪ್ರತಿಭಟನೆ ನಡೆಯುತ್ತಿದ್ದರೂ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರು ಈ ಬಗ್ಗೆ ವಿಚಾರಣೆ ನಡೆಸಲು ಆಸಕ್ತಿ ತೋರಿಸುತ್ತಿಲ್ಲ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ರಾಜಕೀಯ ವಿಚಾರದಲ್ಲಿ ನಡುರಾತ್ರಿಯವರೆಗೆ ವಿಚಾರಣೆ ನಡೆಸುವ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಯಾಕೆ ತಾರತಮ್ಯ ಎಸಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಕಾನೂನನ್ನು ವಿರೋಧಿಸಿ 73 ಪಿಐಎಲ್ ಗಳು, ಹೋರಾಟದಲ್ಲಿ 20 ಸಾವು ಸಂಭವಿಸಿದರೂ, ಪ್ರತಿಭಟನೆಗಳು ಶಾಂತವಾದ ಬಳಿಕ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳುತ್ತಿರುವುದೇಕೆ ಎಂದು ಅವರು ಇದೇ ಸಂದರ್ಭದಲ್ಲಿ ದೇಶದ ಉಚ್ಛ ನ್ಯಾಯಾಲಯವನ್ನು ಪ್ರಶ್ನಿಸಿದ್ದಾರೆ.

ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಭಾಗವಹಿಸಿ ಕೇಂದ್ರ ಸರಕಾರ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.