ಉಡುಪಿ ಶಿರ್ವ ಚರ್ಚ್ ಸಹಾಯಕ ಧರ್ಮಗುರು ಫಾ.ಮಹೇಶ್ ಆತ್ಮಹತ್ಯೆ ಪ್ರಕರಣ ತನಿಖೆಗೆ ಆಗ್ರಹಿಸಿ ಮುಂದುವರಿದ ಪ್ರತಿಭಟನೆ

ಉಡುಪಿ ನವೆಂಬರ್ 3: ಉಡುಪಿಯ ಶಿರ್ವ ಚರ್ಚ್ ನ ಸಹಾಯಕ ಧರ್ಮಗುರು ಫಾ.ಮಹೇಶ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಭಕ್ತರು ನಿನ್ನೆಯಿಂದ ನಡೆಸುತ್ತಿದ್ದ ದಿಢೀರ್ ಪ್ರತಿಭಟನೆ ಇಂದೂ ಕೂಡ ಮುಂದುವರೆದಿದೆ.

ನಿನ್ನೆ ಶನಿವಾರವಾದ ಕಾರಣ ವಾರದ ಪೂಜೆ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಚರ್ಚಗೆ ಬಂದಿದ್ದರು. ಇದ್ದಕ್ಕಿದ್ದಂತೆ ಸಂಘಟಿತರಾದ ಭಕ್ತರು ಹಿರಿಯ ಧರ್ಮ ಗುರುಗಳಲ್ಲಿ ಪ್ರಕರಣದ ತನಿಖೆಗೆ ವಿವರ ಕೇಳಲಾರಂಭಿಸಿದರು. ಈ ವೇಳೆ ಆಕ್ರೋಶ ಭರಿತ ಮಾತುಗಳು ಕೇಳಿಬಂದಾಗ ಧರ್ಮಗುರುಗಳಾದ ಡೆನಿಸ್ ಡೇಸಾ ಅವರು ತಮ್ಮ ನಿವಾಸಕ್ಕೆ ತೆರಳಿದರು. ಇದರಿಂದ ಉದ್ರಿಕ್ತರಾದ ಭಕ್ತರು ಚರ್ಚ್ ನ ಗಂಟೆ ಹೊಡೆಯಲಾರಂಭಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಾರಂಭಿಸಿದರು. ಸಾವಿಗೆ ನ್ಯಾಯ ಕೊಡಿಸಿ ಮತ್ತು ಆತ್ಮಹತ್ಯಗೆ ಕಾರಣವೇನೆಂದು ತಿಳಿಸಲು ಒತ್ತಾಯಿಸಲಾರಂಭಿಸಿದರು.

ಪರಿಸ್ಥಿತಿ ಹದಗೆಡುವುದನ್ನು ಗಮನಿಸಿ ಹೆಚ್ವಿನ ಪೊಲೀಸರನ್ನುಕರೆಸಿಕೊಳ್ಳಬೇಕಾಯ್ತು. ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸ್ಥಳಕ್ಕಾಗಮಿಸಿದರು. ಅವರ ಜೊತೆಗೂ ಮಾತಿನ ಚಕಮಕಿ ನಡೆಸಿದರು. ಸ್ಚತ ಬಿಷಪ್ ಸ್ಥಳಕ್ಕೆ ಆಗಮಿಸಬೇಕೆಂದು ಭಕ್ತರು ಒತ್ತಾಯಿಸಿದರು.ಆದರೆ ಬಿಷಪ್ ಬೇರೊಂದು ಚರ್ಚ್ ನಲ್ಲಿ ಪೂಜಾನಿರತರಾಗಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಉದ್ರಿಕ್ತರನ್ನು ಮಹೇಶ್ ಪ್ರಸಾದ್ ಸಮಾಧಾನಪಡಿಸಿದರು.

ಇಂದು ಮತ್ತೆ ಪೂಜೆ ಸಂದರ್ಭದಲ್ಲಿ ಸೇರಿದ ಭಕ್ತರು ಮತ್ತೆ ಧರ್ಮಗುರು ಫಾ.ಮಹೇಶ್ ಅವರ ಆತ್ಮಹತ್ಯೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಧರ್ಮಗುರುಗಳಾದ ಡೆನಿಸ್ ಡೇಸಾ, ಫಾ. ಮಹೇಶ್ ಅವರ ಕುಟುಂಬಸ್ಥರಿಗೆ ಆತ್ಮಹತ್ಯೆಯ ಬಗ್ಗೆ ಯಾವುದೇ ಸಂಶಯಗಳಿಲ್ಲ ಎಂದು ಈಗಾಗಲೇ ಉಡುಪಿ ಜಿಲ್ಲಾ ಎಸ್ಪಿ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ಈಗ ಸಾರ್ವಜನಿಕರಿಂದ ತನಿಖೆಗೆ ಒತ್ತಾಯ ಕೇಳಿ ಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಫಾ. ಮಹೇಶ್ ಅವರ ಸಾವಿನ ಕುರಿತಂತೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಅಲ್ಲದೆ ತನಿಖೆಗೆ ಆಗ್ರಹಿಸುತ್ತಿರುವ ಸಾರ್ವಜನಿಕರ ಹೊರಾಟಕ್ಕೆ ಬೆಂಬಲ ಇದೆ ಎಂದು ತಿಳಿಸಿದರು.
ಅ.೧೧ ಫಾದರ್ ಮಹೇಶ್ ಪ್ರಸಾದ್ ತಮ್ಮ ಚೇಂಬರ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದು ಸಾಕಷ್ಟು ದಿನವಾದರೂ ಸಮರ್ಪಕ ದೂರು ದಾಖಲಾಗಿಲ್ಲ. ಆತ್ಮಹತ್ಯೆಗೆ ಕಾರಣವೂ ಬಯಲಾಗದೇ ಇರುವುದರಿಂದ ಭಕ್ತರು ಆಕ್ರೋಶಗೊಂಡಿದ್ದು, ಉಡುಪಿ ಪೊಲೀಸ್ ಇಲಾಖೆ ಈಗಾಗಲೇ ಆತ್ಮಹತ್ಯೆ ಎಂದು ಪ್ರಕರಣ ಮುಕ್ತಾಯಗೊಳಿಸಿದೆ.

ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಎಸ್ಪಿ ನಿಶಾ ಜೇಮ್ಸ್ ಪಾ. ಮಹೇಶ್ ಅವರ ಆತ್ಮಹತ್ಯೆ ಬಗ್ಗೆ ಯಾವುದೇ ಸಂಶಯ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಫಾ.ಮಹೇಶ್ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಕುರಿತು ಮಾತಾನಾಡಿದ ಅವರು, ‘ಸುಳ್ಳು ಮಾಹಿತಿ ಮತ್ತು ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಅನುಮತಿ ಇಲ್ಲದೆ ಗುಂಪು ಸೇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

Facebook Comments

comments