ವಾಷಿಂಗ್ಟನ್/ಟೆಹ್ರಾನ್ ,ಏಪ್ರಿಲ್ 01: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದೀಗ ಜಾಗತಿಕ ಸಂಘರ್ಷದ ರೂಪ ಪಡೆಯುತ್ತಿದೆ. ಇರಾನ್ನ ತೈಲ ಕೇಂದ್ರ ಹಾಗೂ ಯುರೇನಿಯಂ ಪುಷ್ಟೀಕರಣ ಘಟಕಗಳ ಮೇಲೆ ಅಮೆರಿಕವು ಭೂದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ, ರಷ್ಯಾ ಬೆಂಬಲಿತ ಭೀಕರ ಚೆಚೆನ್ (Chechen) ಹೋರಾಟಗಾರರು ಇರಾನ್ ಪರವಾಗಿ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಷ್ಯಾದ ಅತ್ಯಂತ ನಂಬಿಕಸ್ತ ಮಿಲಿಟರಿ ಗುಂಪಿನ ನಾಯಕ ರಂಜಾನ್ ಕದಿರೋವ್, ಅಮೆರಿಕದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಂದು ವೇಳೆ ಇರಾನ್ ಮೇಲೆ ಅಮೆರಿಕದ ಸೇನೆ ಭೂದಾಳಿ ನಡೆಸಲು ಮುಂದಾದರೆ, ತಮ್ಮ ಸಾವಿರಾರು ನುರಿತ ಯೋಧರನ್ನು ಇರಾನ್ ರಕ್ಷಣೆಗಾಗಿ ಕಳುಹಿಸುವುದಾಗಿ ಅವರು ಘೋಷಿಸಿದ್ದಾರೆ. ನಗರ ಪ್ರದೇಶದ ಯುದ್ಧಗಳಲ್ಲಿ ಅತಿ ಹೆಚ್ಚು ಪರಿಣತಿ ಹೊಂದಿರುವ ಈ ಪಡೆಗಳು ಯುದ್ಧಭೂಮಿಗೆ ಪ್ರವೇಶಿಸಿದರೆ, ಅಮೆರಿಕದ ಸೇನೆಗೆ ಭಾರಿ ಸವಾಲಾಗುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಸಂಘರ್ಷದಲ್ಲಿ ರಷ್ಯಾ ನೇರವಾಗಿ ಭಾಗಿಯಾಗದಿದ್ದರೂ, ಇರಾನ್ಗೆ ತೆರೆಯ ಮರೆಯಲ್ಲಿ ಭಾರಿ ಬೆಂಬಲ ನೀಡುತ್ತಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಯುದ್ಧನೌಕೆಗಳು ಮತ್ತು ಕ್ಷಿಪಣಿ ಲಾಂಚರ್ಗಳ ಚಲನವಲನದ ಬಗ್ಗೆ ರಷ್ಯಾವು ಇರಾನ್ಗೆ ಉಪಗ್ರಹ ಆಧಾರಿತ ಗುಪ್ತಚರ ಮಾಹಿತಿಗಳನ್ನು ರವಾನಿಸುತ್ತಿದೆ ಎನ್ನಲಾಗಿದೆ. ಇದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತನ್ನ ರಕ್ಷಣಾ ತಂತ್ರಗಳನ್ನು ರೂಪಿಸಲು ಸಹಕಾರಿಯಾಗಿದೆ.
ತನ್ನ ಸಾರ್ವಭೌಮತ್ವದ ಮೇಲೆ ಆಕ್ರಮಣವಾದರೆ ಸಹಿಸುವುದಿಲ್ಲ ಎಂದು ಇರಾನ್ ಸರ್ಕಾರ ಈಗಾಗಲೇ ಗುಡುಗಿದೆ. “ನಮ್ಮ ನೆಲಕ್ಕೆ ಕಾಲಿಡುವ ಆಕ್ರಮಣಕಾರರ ಕಾಲುಗಳನ್ನು ಕತ್ತರಿಸಲಾಗುವುದು” ಎಂದು IRGC ಯ ಹಿರಿಯ ಕಮಾಂಡರ್ಗಳು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, ಪರ್ಷಿಯನ್ ಕೊಲ್ಲಿಯನ್ನು ಬಂದ್ ಮಾಡುವ ಮೂಲಕ ವಿಶ್ವದ ತೈಲ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಇರಾನ್ ಬೆದರಿಕೆ ಹಾಕಿದೆ.
ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಅಮೆರಿಕ ಮತ್ತು ರಷ್ಯಾ ಬೆಂಬಲಿತ ಪಡೆಗಳ ನಡುವಿನ ಈ ಪರೋಕ್ಷ ಯುದ್ಧವು ಮತ್ತೊಂದು ಮಹಾಯುದ್ಧಕ್ಕೆ ನಾಂದಿ ಹಾಡಬಹುದೇ ಎಂಬ ಆತಂಕ ಇಡೀ ವಿಶ್ವವನ್ನು ಆವರಿಸಿದೆ.