ಶಿವಮೊಗ್ಗ,ಏಪ್ರಿಲ್ 04 : ಅತ್ತೆ ಮತ್ತು ಮಾವನ ನಿರಂತರ ಕಿರುಕುಳಕ್ಕೆ ಬೇಸತ್ತು ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸೊರಬ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೃತರನ್ನು ಹೊಡಬಟ್ಟೆ ಗ್ರಾಮದ ಶ್ವೇತಾ (30) ಎಂದು ಗುರುತಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಕಳೆದ ಮಾರ್ಚ್ 29 ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರಿಗೆ ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಶ್ವೇತಾ ಅವರ ಪೋಷಕರು ನೀಡಿದ ದೂರಿನನ್ವಯ ಸೊರಬ ಠಾಣೆಯಲ್ಲಿ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ನಾಲ್ವರು ಪ್ರಮುಖ ಆರೋಪಿಗಳಾದ ಅತ್ತೆ ಜಾನಕಿ, ಮಾವ ಸಣ್ಣಪ್ಪ, ಪತಿಯ ಅಣ್ಣ ಹೇಮಂತ್ ಹಾಗೂ ಸೊಸೆ ದಿವ್ಯ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
“ನಮ್ಮ ಮಗಳಿಗೆ ಅತ್ತೆ-ಮಾವ ಮತ್ತು ಮನೆಯವರು ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದರು. ಮನೆ ಬಿಟ್ಟು ಹೋಗುವಂತೆ ಒತ್ತಾಯಿಸಿ ಮಾನಸಿಕವಾಗಿ ಪೀಡಿಸುತ್ತಿದ್ದರು ಎಂದು ಶ್ವೇತಾ ಅವರ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳಿಗೆ ನೀಡುತ್ತಿದ್ದ ನಿರಂತರ ಕಿರುಕುಳವೇ ಈ ದುರಂತಕ್ಕೆ ನೇರ ಕಾರಣ ಎಂದು ಅವರು ದೂರಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.