ಮತದಾನದ ಮುನ್ನ 48 ಗಂಟೆಗಳ ಅವಧಿ ಮುದ್ರಣ ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ

ಮಂಗಳೂರು ಏಪ್ರಿಲ್ 12: ಹಿಂದಿನ ಚುನಾವಣೆಗಳಲ್ಲಿ ಮತದಾನದ ಹಾಗೂ ಅದರ ಹಿಂದಿನ ದಿನ ಉದ್ರಿಕ್ತ ಅವಮಾನಗೊಳಿಸುವ ಹಾಗೂ ತಪ್ಪು ಕಲ್ಪನೆ ಜಾಹೀರಾತುಗಳನ್ನು ಮುದ್ರಣ ಮಾಧ್ಯಮದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದನ್ನು ಭಾರತ ಚುನಾವಣಾ ಆಯೋಗ ಗಮನಿಸಿದೆ.

ಇದರಿಂದ ಇಡೀ ಚುನಾವಣಾ ಪ್ರಕ್ರಿಯೆಯ ಉದ್ದೇಶವೇ ಬುಡಮೇಲು ಆಗುತ್ತದೆ. ಇಂತಹ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ಸ್ಪಷ್ಠೀಕರಣ ನೀಡುವ ಅವಕಾಶವು ತಪ್ಪಿ ಹೋಗುತ್ತದೆ. ಇಂತಹ ಸಂಗತಿ ಅಥವಾ ಘಟನೆಗಳು ಪುನರಾವರ್ತಿತ ಆಗುವುದನ್ನು ತಪ್ಪಿಸಲು ದ್ವೇಷ ಕೆರಳಿಸುವ ಹಾಗೂ ತಪ್ಪು ಭಾವನೆ ಮೂಡಿಸುವ ಜಾಹೀರಾತುಗಳನ್ನು ರಾಜಕೀಯ ಪಕ್ಷ ಚುನಾವಣಾ ಅಭ್ಯರ್ಥಿ ಹಾಗೂ ಯಾವುದೇ ಸಂಘ ಸಂಸ್ಥೆಗಳು ಮತದಾನ ಹಾಗೂ ಅದರ ಹಿಂದಿನ ದಿನಗಳ ಅವಧಿಯಲ್ಲಿ ಪ್ರಕಟಿಸುವುದನ್ನು ಚುನಾವಣಾ ಆಯೋಗ ಸಂಪೂರ್ಣವಾಗಿ ನಿಷೇಧಿಸಿದೆ. ಇದು ಪ್ರಸಕ್ತ ಲೋಕಸಭಾ ಚುನಾವಣೆಯ ಎಲ್ಲ ಹಂತಗಳಲ್ಲಿ ಅನ್ವಯಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಏಪ್ರಿಲ್ 16 ಹಾಗೂ 17 ರಂದು ಮುದ್ರಣ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ಆಯಾ ಲೋಕಸಭಾ ಕ್ಷೇತ್ರಗಳ ಎಂ.ಸಿ.ಎಂ.ಸಿ ಸಮಿತಿಗಳಿಂದ ಮುಂಚಿತವಾಗಿ ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಿ ಭಾರತ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು, ಚುನಾವಣಾ ಅಭ್ಯರ್ಥಿಗಳು ಹಾಗೂ ಎಲ್ಲ ದಿನಪತ್ರಿಕೆಗಳವರು ಕಡ್ಡಾಯವಾಗಿ ಪಾಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.