ಕಿರುತೆರೆಯ ಖ್ಯಾತ ಹಾಸ್ಯ ಕಲಾವಿದ ಪ್ರಶಾಂತ್ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಮಹತ್ವದ ಬದಲಾವಣೆಯ ಬಗ್ಗೆ ಕುತೂಹಲ ಮೂಡಿಸುತ್ತಿದ್ದ ಪ್ರಶಾಂತ್, ಇದೀಗ ನಟಿ ಕೃತಿ ಗೌಡ ಅವರೊಂದಿಗೆ ವಿವಾಹವಾಗುತ್ತಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಈ ಮೂಲಕ ಕಿರುತೆರೆ ಲೋಕದ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾದಂತಾಗಿದೆ.

ಮದುವೆಯ ಪೂರ್ವಭಾವಿ ಕಾರ್ಯಕ್ರಮವಾದ ‘ಹೂ ಮುಡಿಸುವ ಶಾಸ್ತ್ರ’ವು ಕಳೆದ ಏಪ್ರಿಲ್ 18ರ ಶನಿವಾರದಂದು ಬೆಂಗಳೂರಿನಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿದೆ. ಕುಟುಂಬದ ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಸಂಪ್ರದಾಯಬದ್ಧ ಕಾರ್ಯಕ್ರಮದಲ್ಲಿ ಪ್ರಶಾಂತ್ ಗೌಡ ಮತ್ತು ಕೃತಿ ಗೌಡ ಪರಸ್ಪರ ಉಂಗುರ ಬದಲಾಯಿಸಿಕೊಂಡು ಹೊಸ ಜೀವನದತ್ತ ಹೆಜ್ಜೆ ಇರಿಸಿದ್ದಾರೆ. ಈ ಸಂಭ್ರಮದ ಫೋಟೋಗಳು ಮತ್ತು ವಿಡಿಯೋಗಳನ್ನು ಪ್ರಶಾಂತ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳಿಂದ ಹಾಗೂ ಸಹ ಕಲಾವಿದರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಶಾಂತ್ ಗೌಡ ಅವರ ಕೈಹಿಡಿಯಲಿರುವ ಕೃತಿ ಗೌಡ ಅವರು ಕೂಡ ಕಲಾವಿದರೇ ಆಗಿದ್ದು, ಈ ಹಿಂದೆ ‘ಬ್ರೇಕ್ ಫೆಲ್ಯೂವರ್’ ಎಂಬ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ ಇನ್ಫ್ಲುಯೆನ್ಸರ್ ಆಗಿರುವ ಕೃತಿ, ತಮ್ಮ ವಿಭಿನ್ನ ಫೋಟೋಶೂಟ್ಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಈ ಜೋಡಿಯ ನಡುವೆ ಕಳೆದ ಕೆಲವು ಸಮಯದಿಂದ ಸ್ನೇಹವಿತ್ತು ಎನ್ನಲಾಗಿದ್ದು, ಇದೀಗ ಅದು ಮದುವೆಯ ಹಂತಕ್ಕೆ ತಲುಪಿದೆ.
ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋನ ಸತತ ಮೂರು ಸೀಸನ್ಗಳಲ್ಲಿ ಭಾಗವಹಿಸಿ ತಮ್ಮ ವಿಶಿಷ್ಟ ಹಾಸ್ಯ ಪ್ರಜ್ಞೆಯ ಮೂಲಕ ಮನೆಮಾತಾಗಿದ್ದಾರೆ. ಇದರ ಜೊತೆಗೆ ‘ಕ್ವಾಟ್ಲೆ ಕಿಚನ್’ ಶೋನಲ್ಲಿ ‘ಕ್ವಾಟ್ಲೆ ಆಫ್ ದಿ ಸೀಸನ್’ ಪ್ರಶಸ್ತಿ ಹಾಗೂ ‘ಬಾಯ್ಸ್ vs ಗರ್ಲ್ಸ್’ ಶೋನಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ವಿಶೇಷವೆಂದರೆ, ಜೀವನದ ಈ ಸುಂದರ ಕ್ಷಣಗಳ ನೆನಪಿಗಾಗಿ ಅವರು ಇತ್ತೀಚೆಗಷ್ಟೇ ಅದ್ದೂರಿ ‘ಟಾಟಾ ಕರ್ವ್’ ಕಾರನ್ನು ಖರೀದಿ ಮಾಡಿದ್ದರು. ಮದುವೆಯ ಮನ್ನವೇ ಹೊಸ ಕಾರು ಮನೆಗೆ ಬಂದಿರುವುದು ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಸದ್ಯಕ್ಕೆ ಹೂ ಮುಡಿಸುವ ಶಾಸ್ತ್ರ ಪೂರೈಸಿರುವ ಈ ಜೋಡಿ, ಶೀಘ್ರದಲ್ಲೇ ಮದುವೆಯ ನಿಖರ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.