Connect with us

    LATEST NEWS

    ಪ್ರಣವ್ ಮುಖರ್ಜಿ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ

    ನವದೆಹಲಿ: ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ 84 ವರ್ಷದ ಪ್ರಣಬ್ ಮುಖರ್ಜಿ ಅವರನ್ನು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಮಸ್ಯೆ ಉದ್ಭವವಾಗಿತ್ತು. ಹೀಗಾಗಿ ಪ್ರಣಬ್ ಅವರಿಗೆ ತುರ್ತಾಗಿ ಮಿದುಳು ಚಿಕಿತ್ಸೆಯನ್ನು ಮಾಡಲಾಗಿತ್ತು.

    ಆದರೆ, ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೋನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿತ್ತು. ಆದರೂ ಮಿದುಳು ಶಸ್ತ್ರ ಚಿಕಿತ್ಸೆಯನ್ನು ಮುಗಿಸಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್ ಸಪೋರ್ಟ್) ಮಾಡುವ ಮೂಲಕ ತೀವ್ರ ನಿಗಾ ವಹಿಸಲಾಗಿತ್ತು. ಈ ವೇಳೆ ಅವರು ಶಾಶ್ವತ ಕೋಮಾಕ್ಕೆ ಜಾರಿದ್ದರು. ಆದರೆ, ಎಷ್ಟೇ ಪ್ರಯತ್ನ ನಡೆಸಿದರು ಪ್ರಣಬ್‌ ಮುಖರ್ಜಿ ಚಿಕಿತ್ಸೆಗೆ ಸ್ಪಂದಿಸಿಲ್ಲ. ಹೀಗಾಗಿ ಸಂಜೆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಬಂಗಾಳದಲ್ಲಿ 1935, ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಗಳಾಗುವ ಮುನ್ನ ಅವರು ವಿದೇಶಾಂಗ ಸಚಿವ, ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಅವರು ರಾಷ್ಟ್ರಪತಿ ಅಧಿಕಾರ ಪೂರ್ಣಗೊಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು.

    ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ದೇಶದ ಪ್ರಥಮ ಪ್ರಜೆಯಾಗಿ ಪ್ರಣವ್ ಅವರು ರಾಷ್ಟ್ರಪತಿ ಭವನವನ್ನು ಜನರ ಸನಿಹಕ್ಕೆ ತಂದಿದ್ದರು. ಎಲ್ಲರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದರು. ರಾಷ್ಟ್ರಪತಿ ಭವನದ ದ್ವಾರವನ್ನು ಸಾರ್ವಜನಿಕರಿಗಾಗಿ ತೆರೆದಿದ್ದರು’ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

    ಭಾರತ ರತ್ನ ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಇಡೀ ಭಾರತವೇ ದುಃಖಿಸುತ್ತಿದೆ. ಅವರು ನಮ್ಮ ದೇಶದ ಅಭಿವೃದ್ಧಿ ಪಥದಲ್ಲಿ ಅವರ ಅಳಿಸಲಾಗದ ಹೆಜ್ಜೆಗುರುತು ಇದೆ. ಶ್ರೇಷ್ಠ ವಿದ್ವಾಂಸ, ಅತ್ಯುತ್ತಮ ರಾಜಕಾರಣಿಯಾಗಿದ್ದ ಅವರನ್ನು ಸಮಾಜದ ಎಲ್ಲ ವರ್ಗದವರೂ ಮೆಚ್ಚಿಕೊಂಡಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಜೀ ಅವರ ನಿಧನದಿಂದ ತೀವ್ರ ನೋವಾಗಿದೆ. ಸಮಾಜದ ಎಲ್ಲ ವರ್ಗದ ಜನರೂ ಅವರನ್ನು ಗೌರವಿಸುತ್ತಿದ್ದರು. ಅವರ ನಿಧನವು ವೈಯಕ್ತಿಕವಾಗಿಯೂ ನನಗಾದ ನಷ್ಟವಾ. ಅವರು ಭಾರತದ ಇತಿಹಾಸ, ರಾಜತಾಂತ್ರಿಕತೆ, ಸಾರ್ವಜನಿಕ ನೀತಿ ಮತ್ತು ರಕ್ಷಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply