LATEST NEWS
ಟೈಗರ್ ಕಾರ್ಯಾಚರಣೆ ವಿರುದ್ದ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ – ಗೂಡಂಗಡಿ ವ್ಯಾಪಾರಿಯ ಮಗ ಮೇಯರ್ ಆಗಿ ಸರ್ವಾಧಿಕಾರಿಯಾಗಿ ವರ್ತನೆ
ಮಂಗಳೂರು ಅಗಸ್ಟ್ 07: ಮಹಾನಗರಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ವಿರುದ್ದ ಬೀದಿ ಬದಿ ವ್ಯಾಪಾರಸ್ಥರು ಇಂದು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಪಿವಿಎಸ್ ವೃತ್ತದಿಂದ ಲಾಲ್‌ಭಾಗ್‌ವರೆಗೆ ಮೆರವಣಿಗೆಯಲ್ಲಿ ಸಾಗಿದ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದರು. .
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಬಡವರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು. ಸ್ವಾಧೀನಪಡಿಸಿಕೊಂಡ ಸೊತ್ತುಗಳನ್ನು ಮರಳಿಸಬೇಕು ಎಂದು ಆಗ್ರಹಿಸಿದರು. ನಗರದ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಪ್ರತಿಭಟನೆಗೆ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್, ‘ಬೀದಿ ಬದಿಯ ಶಾಶ್ವತ ರಚನೆಗಳನ್ನಷ್ಟೇ ನಾವು ತೆರವುಗೊಳಿಸುತ್ತೇವೆ. ತಳ್ಳುಗಾಡಿಗಳನ್ನು ತೆರವುಗೊಳಿಸುವುದಿಲ್ಲ. 15 ದಿನಗಳೊಳಗೆ ಪಟ್ಟಣ ವ್ಯಾಪಾರ ಸಮಿತಿಯ ಸಭೆ ನಡೆಸುತ್ತೇನೆ. ಬೀದಿ ಬದಿ ವ್ಯಾಪಾರ ವಲಯ ಗುರುತಿಸಿ ಅಲ್ಲಿ ಎಲ್ಲ ಸೌಕರ್ಯ ಕಲ್ಪಿಸಿ ಗೌರವಯುತವಾಗಿ ವ್ಯಾಪಾರ ನಡೆಸಲು ವ್ಯವಸ್ಥೆ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಬಿ.ಕೆ. ಇಮ್ತಿಯಾಜ್ ಮೇಯರ್ ಸುಧೀರ್ ಶೆಟ್ಟಿ ಅವರೂ ಕೂಡ ಒಬ್ಬ ಬೀದಿ ಬದಿ ವ್ಯಾಪಾರಿ ಮಗ ಎಂಬುದು ನೆನಪಿರಲಿ. ಅವರ ತಂದೆ ಇಟ್ಟಿದ್ದ ಗೂಡಂಗಡಿಯನ್ನು ಇದೇ ರೀತಿ ತೆರವು ಮಾಡುತ್ತಿದ್ದರೆ ಇಂದು ಸುಧೀರ್ ಶೆಟ್ಟಿ ಮೇಯರ್ ಆಗುತ್ತಿರಲಿಲ್ಲ’ ಎಂದರು. ಗೂಡಂಗಡಿ ವ್ಯಾಪಾರಿಯ ಮಗನಾದ ಮೇಯರ್ ಆಗಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ಅಮಾನವೀಯ’ ಎಂದು ಹೇಳಿದರು.
ನಗರದಲ್ಲಿ 8,500 ಮಂದಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಕ್ಕೆ ಸಾಲ ಕೊಡಲಾಗಿದೆ. ಆದರೆ 667 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯ ಆಗಿಲ್ಲ. ನೀವು ಹಾಕಿರುವ ಷರತ್ತು ಬೀದಿ ಬದಿ ವ್ಯಾಪಾರಿಗಳ ಕಾನೂನು ಪ್ರಕಾರ ಇಲ್ಲ. ಬಿಜೆಪಿ ಅಂದರೆ ಬುಲ್ಡೋಜರ್ ಪಕ್ಷ ಎನ್ನುವುದನ್ನು ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಅವರು ಆರೋಪಿಸಿದರು.
ಎಸ್‌ಡಿಟಿಯು ಕಾರ್ಯಕರ್ತರು ತಮ್ಮ ಸಂಘಟನೆಯ ಬಾವುಟ ದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದರು. ಇದಕ್ಕೆ ಪ್ರತಿಭಟನಾಕಾರರು ಆಕ್ಷೇಪಿಸಿದರು. ಸಮಾನ ಮನಸ್ಕ ಸಂಘಟನೆ ಸಮಸ್ತ ಧರ್ಮಗಳ ಪರವಾಗಿರುವಂತಹದ್ದು. ಯಾವುದೇ ಧರ್ಮದ ಬಾವುಟದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುವುದು ಬೇಡ ಎಂದು ಬೀದಿ ಬದಿಬದಿ ವ್ಯಾಪಾರಿಗಳ ಸಂಘಟನೆಯ ಪ್ರಮುಖರು ಹೇಳಿದರು. ಎಸ್‌ಡಿಟಿಯು ಕಾರ್ಯ ಕರ್ತರನ್ನು ಪೊಲೀಸರು ಹೊರ ಕಳುಹಿಸಿದರು.
You must be logged in to post a comment Login