LATEST NEWS
ಸಿದ್ಧಗೊಂಡಿದೆ ಪೂಜಾರಿ ಆತ್ಮಚರಿತ್ರೆ ಪುಸ್ತಕ, ಆರಂಭಗೊಂಡಿದೆ ಕಾಂಗ್ರೇಸ್ ಪಾಳಯದಲ್ಲಿ ನಡುಕ..!

ಸಿದ್ಧಗೊಂಡಿದೆ ಪೂಜಾರಿ ಆತ್ಮಚರಿತ್ರೆ ಪುಸ್ತಕ, ಆರಂಭಗೊಂಡಿದೆ ಕಾಂಗ್ರೇಸ್ ಪಾಳಯದಲ್ಲಿ ನಡುಕ..!
ಮಂಗಳೂರು,ಜನವರಿ 6: ರಾಜ್ಯವಿಧಾನ ಸಭಾ ಚುನಾವಣೆ ಕೌನ್ಟ್ ಡೌನ್ ಆರಂಭಗೊಂಡಿದ್ದು, ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆಯಲ್ಲಿ ಯಾವೆಲ್ಲಾ ವಿಷಯಗಳನ್ನಿಟ್ಟು ಬೇಯಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದೆ. ಒಂದೆಡೆ ಬಿಜೆಪಿ ಪರಿರ್ವತನಾ ಯಾತ್ರೆ ಮುಗಿಸಿದ್ದರೆ, ಇನ್ನೊಂದಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಧನಾ ಸಮಾವೇಶ ನಡೆಸುತ್ತಾ ಓಟಿನ ದಂಡಯಾತ್ರೆಯನ್ನು ಆರಂಭಿಸಿದ್ದಾರೆ.
ತನ್ನ ಅಧಿಕಾರವಾಧಿಯಲ್ಲಿ ಮಾಡಿದ ಸಾಧನೆಯನ್ನು ಮುಂದಿಟ್ಟಕೊಂಡು ಜನರ ಮುಂದೆ ಹೋಗಬೇಕಾದ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೇಸ್ ಗೆ ಇದೀಗ ಪಾದದಡಿಯ ಮಣ್ಣು ಕುಸಿಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಹಾಗೂ ಇತ್ತೀಚೆಗೆ ಕಾಂಗ್ರೇಸ್ ನಿಂದಲೇ ಮೂಲಗುಂಪಾಗುತ್ತಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರೇ ಕಾಂಗ್ರೇಸ್ ಗೆ ಈ ಶಾಕ್ ನೀಡಲಿದ್ದಾರೆ,
ತನ್ನ ಸುಧೀರ್ಘ ಕಾಲದ ರಾಜಕೀಯ ಜೀವನದಲ್ಲಿ ತಾನು ಕಂಡುಕೊಂಡದ್ದೇನು, ಕಳೆದುಕೊಂಡದ್ದೇನು, ಪಡೆದುಕೊಂಡದ್ದೇನು, ಬೆನ್ನು ತಟ್ಟಿದವರ್ಯಾರು, ಬೆನ್ನಿಗೆ ಚೂರಿ ಹಾಕಿದವರಾರು ಎನ್ನುವ ಎಲ್ಲಾ ಘಟನೆಗಳನ್ನೊಳಗೊಂಡ ಜನಾರ್ಧನ ಪೂಜಾರಿಯವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿರುವುದೇ ಈ ಕಂಪನಕ್ಕೆ ಕಾರಣವಾಗಲಿದೆ.
ನೇರ,ನಿಷ್ಠುರ ಮಾತುಗಳ ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಗುರುತಿಸಿ ಕೊಂಡಿರುವ ಬಿ.ಜನಾರ್ಧನ ಪೂಜಾರಿ ಅವರ ಆತ್ಮಚರಿತ್ರೆ ಬಿಡುಗಡೆಗೆ ಸಿದ್ದವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣ ದಲ್ಲಿ ಭಾರಿ ಬಿರುಗಾಳಿ ಏಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಈ ವಿಚಾರವನ್ನು ಈಗಾಗಲೇ ಮಾದ್ಯಮಗಳ ಮುಂದೆ ಹೇಳಿರುವ ಜನಾರ್ಧನ ಪೂಜಾರಿ ಈ ಪುಸ್ತಕದ ಬಿಡುಗಡೆಗೆ ಜನವರಿ 26 ರ ಗಣರಾಜ್ಯೋತ್ಸವ ದಿನವನ್ನೇ ಆಯ್ದುಕೊಂಡಿದ್ದಾರೆ.
ತನ್ನ ಜೀವನದ ಎಲ್ಲಾ ಏಳು-ಬೀಳುಗಳು ಈ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಅಚ್ಚಾಗಲಿದೆ ಎಂದು ತಿಳಿಸಿರುವ ಪೂಜಾರಿ ಈ ಪುಸ್ತಕ ಬಿಡುಗಡೆಯ ಬಳಿಕ ಕೆಲವರಲ್ಲಿ ಅಲ್ಲೋಲ ಕಲ್ಲೋಲವಾಗುವ ಅನುಭವವಾಗಲಿದೆ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ.