ಆಯೋಧ್ಯೆ ತೀರ್ಪನ್ನು ಸಾರ್ವಜನಿಕರು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು – ಜನಾರ್ಧನ ಪೂಜಾರಿ ಮನವಿ

ಮಂಗಳೂರು ನವೆಂಬರ್ 8: ಆಯೋಧ್ಯೆ ತೀರ್ಪನ್ನು ಸಾರ್ವಜನಿಕರು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು, ಯಾವುದೇ ಅಶಾಂತಿಗೆ ಕಾರಣವಾಗಬಾರದು ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೇಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಜನತೆಯಲ್ಲಿ ಮನವಿ‌ ಮಾಡಿದ್ದಾರೆ.

ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ತನ್ನ ತೀರ್ಪು ಪ್ರಕಟಿಸಲಿದ್ದು, ತೀರ್ಪನ್ನು ಎಲ್ಲಾ ಸಮಾಜ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ ಪೂಜಾರಿ ಬಿಜೆಪಿ ಪಕ್ಷ ಅಪರೇಶನ್ ಕಮಲದ ಮೂಲಕ ಮೈತ್ರಿ ಸರಕಾರವನ್ನು ಬೀಳಿಸಿದ್ದು, ಈ ಕುರಿತ ಮುಖ್ಯಮಂತ್ರಿ ಯಡಿಯೂರಪ್ಪ ರ ಆಡಿಯೋ ಕೂಡಾ ಬಿಡುಗಡೆಯಾಗಿದೆ. ಸುಪ್ರೀಂಕೋರ್ಟ್ ಕೂಡಾ ಈ ಆಡಿಯೋವನ್ನು ಪುರಾವೆಯಾಗಿಯೂ ಪರಿಗಣಿಸಲಿರುವ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಯಡಿಯೂರಪ್ಪ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೇಸ್ ಪಕ್ಷ ಟಿಕೆಟ್ ಹಂಚಿಕೆಯಲ್ಲಿ ಭಾರೀ ಗೊಂದಲ ಉಂಟುಮಾಡಿದ್ದು, ಇದರ ಪ್ರಯೋಜನವನ್ನು ಬಿಜೆಪಿ ಪಕ್ಷ ಪಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.