ಮಂಗಳೂರು ಎಪ್ರಿಲ್ 22; ವರ್ಗಾವಣೆ ಆದೇಶ ಪತ್ರ ಬಂದು ಮೂರು ತಿಂಗಳು ಕಳೆದಿದ್ದರೂ, ನಗರ ಪೊಲೀಸ್ ಕಮಿಷನರ್ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಕುಟುಂಬಸ್ಥರು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಡಾ. ಎಂ.ಎ. ಸಲೀಂ ಅವರಿಗೆ ಅಹವಾಲು ಸಲ್ಲಿಸಿದ ಘಟನೆ ಮಂಗಳವಾರ ನಡೆದಿದೆ.

ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ್ದ ಡಿಜಿಪಿ ಅವರನ್ನು ಭೇಟಿ ಮಾಡಿದ ಕುಟುಂಬಸ್ಥರು, “ಕಳೆದ 10 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತರ ಕರ್ನಾಟಕ ಮೂಲದ ಸಿಬ್ಬಂದಿಗೆ ವರ್ಗಾವಣೆ ಆದೇಶ ಬಂದಿದೆ. ಆದರೆ, ಸಿಬ್ಬಂದಿ ಕೊರತೆಯ ನೆಪ ಹೇಳಿ ಕಮಿಷನರ್ ಅವರನ್ನು ಬಿಡುಗಡೆ ಮಾಡುತ್ತಿಲ್ಲ. ಊರಿನಲ್ಲಿ ವಯಸ್ಸಾದ ಪೋಷಕರಿದ್ದಾರೆ, ಮಕ್ಕಳ ಶಾಲಾ ಪ್ರವೇಶದ ಸಮಯ ಹತ್ತಿರ ಬರುತ್ತಿದೆ. ನಮಗೆ ನ್ಯಾಯ ಒದಗಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು,” ಎಂದು ಎಚ್ಚರಿಸಿದರು.

ಕುಟುಂಬಸ್ಥರ ಅಹವಾಲು ಸ್ವೀಕರಿಸಿದ ಡಿಜಿಪಿ ಡಾ. ಎಂ.ಎ. ಸಲೀಂ, “ಈ ವಿಚಾರವಾಗಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಿಬ್ಬಂದಿಯ ನೋವು ನಮಗೆ ಅರ್ಥವಾಗುತ್ತದೆ. ಹಂತ ಹಂತವಾಗಿ ವರ್ಗಾವಣೆ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಈ ವಿವಾದದ ಕುರಿತು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಅಂಕಿ-ಅಂಶಗಳ ಸಮೇತ ಸ್ಪಷ್ಟನೆ ನೀಡಿದ್ದಾರೆ:
ಹುದ್ದೆಗಳ ವಿವರ: ನಗರದಲ್ಲಿ ಮಂಜೂರಾದ ಒಟ್ಟು ಸಿಬ್ಬಂದಿ 801, ಸದ್ಯ ಇರುವುದು 685 ಮಾತ್ರ. ಈಗಾಗಲೇ 116 (14.4%) ಹುದ್ದೆಗಳು ಖಾಲಿ ಇವೆ.
ನಿಯಮದ ಅಡ್ಡಿ: ವರ್ಗಾವಣೆಗೊಂಡಿರುವ 63 ಕಾನ್ಸ್ಟೆಬಲ್ಗಳನ್ನು ಈಗಲೇ ಬಿಡುಗಡೆ ಮಾಡಿದರೆ, ಖಾಲಿ ಹುದ್ದೆಗಳ ಪ್ರಮಾಣ ಶೇ. 22.1ಕ್ಕೆ ಏರುತ್ತದೆ. ಸರ್ಕಾರದ ನಿಯಮದ ಪ್ರಕಾರ ಖಾಲಿ ಹುದ್ದೆಗಳ ಪ್ರಮಾಣ ಶೇ. 15 ಮೀರಬಾರದು. ಈ ಕಾರಣಕ್ಕಾಗಿಯೇ ಅವರನ್ನು ಬಿಡುಗಡೆ ಮಾಡಲಾಗಿಲ್ಲ.
ಮಾನವೀಯ ದೃಷ್ಟಿಕೋನ: “ನಾವು ಸಿಬ್ಬಂದಿಯ ಯೋಗಕ್ಷೇಮದ ಜೊತೆಗೆ ನಗರದ ಕಾನೂನು ಸುವ್ಯವಸ್ಥೆಯನ್ನೂ ನೋಡಬೇಕಿದೆ. ಅಂತರ್ ಜಿಲ್ಲಾ ವರ್ಗಾವಣೆಗಾಗಿ ಅನೇಕರು ಬಡ್ತಿಯನ್ನೂ ತ್ಯಜಿಸಿದ್ದಾರೆ. ಅವರ ನೋವು ನಮಗೆ ತಿಳಿದಿದೆ. ಆದರೂ, ಇಲ್ಲಿಯವರೆಗೆ ನಾನು ಯಾವುದೇ ಕಾನ್ಸ್ಟೆಬಲ್ನ ಗಳಿಕೆ ರಜೆ (EL) ಅರ್ಜಿಯನ್ನು ತಿರಸ್ಕರಿಸಿಲ್ಲ,” ಎಂದು ಕಮಿಷನರ್ ತಿಳಿಸಿದ್ದಾರೆ.