Connect with us

    BANTWAL

    ಪೊಲೀಸರ ಕಣ್ಗಾವಲಿನಲ್ಲಿ ಸಜಿಪನಡು ಗ್ರಾಮ

    ಪೊಲೀಸರ ಕಣ್ಗಾವಲಿನಲ್ಲಿ ಸಜಿಪನಡು ಗ್ರಾಮ

    ಬಂಟ್ವಾಳ ಮಾರ್ಚ್ 28: 10 ತಿಂಗಳ ಮಗುವಿಗೆ ಕೊರೊನಾ ಸೊಂಕು ತಗುಲಿದ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮವನ್ನು ಸೀಜ್ ಮಾಡಲಾಗಿದ್ದು, ಇಡೀ ಗ್ರಾಮ ಈಗ ಪೊಲೀಸರ ಕಣ್ಗಾವಲಿನಲ್ಲಿದೆ. ಗ್ರಾಮದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಕೊರೊನಾ ಮಹಾಮಾರಿಗೆ ಇಡೀ ದಕ್ಷಿಣಕನ್ನಡ ಜಿಲ್ಲೆ ತತ್ತರಿಸಿ ಹೊಗಿದೆ. ಅದರಲ್ಲೂ 10 ತಿಂಗಳ ಮಗುವಿಗೆ ಕೊರೊನಾ ಸೊಂಕು ದೃಢಪಟ್ಟಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಕೊರೊನಾ ಸೊಂಕು ದೃಢಪಟ್ಟ ಸಜಿಪನಡು ಗ್ರಾಮದಲ್ಲಿ ಮನೆಯಿಂದ ಯಾರೂ ಹೊರಬಾರದಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ.

    ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸಜಿಪನಡು ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನೊಳಗೊಂಡ ಗ್ರಾಮ ಮಟ್ಟದ ಕಾರ್ಯಪಡೆಯನ್ನು ರಚಿಸಿ ಕೊರೋನ ಸೋಂಕು ಹರಡದಂತೆ ಮುಂಜಾಗೃತ ಕ್ರಮವಹಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

    ಅಲ್ಲದೆ  ಜಿಲ್ಲಾಧಿಕಾರಿ  ಸಿಂಧೂ ಬಿ ರೂಪೇಶ್ ನಿನ್ನೆ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಗ್ರಾಮದ ಯಾವುದೇ ಮನೆಗೆ ದಿನಸಿ, ಹಾಲು, ಔಷಧ ಸಹಿತ ದಿನಬಳಕೆಯ ಅಗತ್ಯ ವಸ್ತುಗಳು ಬೇಕಾದರೆ ಸ್ಥಳೀಯ 13 ಅಂಗಡಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಪಟ್ಟಿಯಲ್ಲಿ ಅಂಗಡಿ ಮಾಲಕರ ಹೆಸರು, ಮೊಬೈಲ್ ಸಂಖ್ಯೆ ಇದ್ದು ವಾಟ್ಸ್ ಆಪ್ನಲ್ಲಿ ಗ್ರಾಮದ ಜನರಿಗೆ ಕಳುಹಿಸಲಾಗಿದೆ. ಅಲ್ಲದೆ ಪ್ರಿಂಟ್ ತೆಗೆದು ಗ್ರಾಮದ ವಿವಿಧೆಡೆ ಅಂಟಿಸಲಾಗಿದೆ.

    ಸಾಮಗ್ರಿ ಬೇಕಾದವರು ಅಂಗಡಿಯವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಾಮಗ್ರಿಗಳ ಪಟ್ಟಿ ನೀಡಬೇಕು. ಸಾಮಗ್ರಿಗಳನ್ನು ಅಂಗಡಿಯಾತ ಅಥವಾ ಗ್ರಾಮ ಪಂಚಾಯತ್ ಸದಸ್ಯರು ಆಯಾಯ ಮನೆಗೆ ತಲುಪಿಸಲಿದ್ದಾರೆ ಎಂದು ಸೂಚನೆ ನೀಡಲಾಗಿದೆ.ಆಶಾ ಕಾರ್ಯಕರ್ತರ ತಂಡವೊಂದನ್ನು ರಚಿಸಿದ್ದು ಈ ತಂಡದ ಸದಸ್ಯರು ಗ್ರಾಮದ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಮನೆ ಮಂದಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.

    ಜೊತೆಗೆ ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಅಲ್ಲದೆ ಸಜಿಪನಡು ಗ್ರಾಮದ ಯಾರೂ ಗ್ರಾಮದಿಂದ ಹೊರಗೆ ಹೋಗದಂತೆ ಹಾಗೂ ಹೊರಗಿನ ಯಾರೂ ಗ್ರಾಮಕ್ಕೆ ಬಾರದಂತೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ. ಸಜಿಪನಡು ಮತ್ತು ಕುಕ್ಕಾಜೆ ಗ್ರಾಮದ ರಸ್ತೆಗೆ ಕಲ್ಲುಗಳಲ್ಲಿ ಅಡ್ಡವಾಗಿ ಇಟ್ಟು ವಾಹನಗಳ ಸಂಚಾರವನ್ನು ಕೂಡಾ ನಿರ್ಬಂಧಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply