ಜನಪ್ರತಿನಿಧಿಗಳಿಗೆ ಬಕೇಟು ಹಿಡಿಯಲು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕಾಪು ಪೋಲೀಸರು

ಉಡುಪಿ,ಮೇ 1 : ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ತಂದೆಯಾಗಿರುವ ಮಾಜಿ ಪ್ರಧಾನಿ ದೇವೇಗೌಡರ ರೆಸಾರ್ಟ್ ರೆಸ್ಟ್ ಸಾರ್ವಜನಿಕರ ಹಾಗೂ ಮಾಧ್ಯಮದವರ ನಿದ್ದೆಗೆಡಿಸಿದೆ.

ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಈ ಖಾಸಗಿ ಹೆಲ್ತ್ ರೆಸಾರ್ಟ್ ನಲ್ಲಿ ಇಬ್ಬರೂ ತಂಗಿದ್ದು, ಇಬ್ಬರ ಚಲನವಲನಗಳನ್ನು ಗಮನಿಸಲು ಮಾಧ್ಯಮದ ಮಂದಿಯೂ ಈ ರೆಸಾರ್ಟ್ ನ ಅಕ್ಕಪಕ್ಕದಲ್ಲೇ ತಂಗುವಂತಾಗಿದೆ.

ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿ ಎನ್ನುವ ಒಂದೇ ಕಾರಣಕ್ಕಾಗಿ ಮಾಧ್ಯಮದ ಮಂದಿ ಈ ಇಬ್ಬರನ್ನೂ ಹಗಲಿನಿಂದ ರಾತ್ರಿ ತನಕ ಕಾಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಒಂದು ವೇಳೆ ಈ ಇಬ್ಬರಿಗೂ ಯಾವುದೇ ಪದವಿ ಇಲ್ಲದೇ ಹೋದಲ್ಲಿ ಮಾಧ್ಯಮದ ಮಂದಿಯಂತು ಇತ್ತ ಮುಖ ಮಾಡಿಯೂ ಮಲಗುತ್ತಿರಲಿಲ್ಲ ಎನ್ನುವ ಸಾಮಾನ್ಯ ಜ್ಞಾನವನ್ನು ಮಾಧ್ಯಮಗಳಿಗೆ ನಿರ್ಬಂದ ಹೇರುತ್ತಿರುವ ಈ ಆಸಾಮಿಗಳಿಗೆ ತಿಳಿಯಬೇಕಿತ್ತು.

ಜನರ ತೆರಿಗೆ ಹಣದಲ್ಲಿ ಸಂಭಾವನೆ ಹಾಗೂ ಸೌಲಭ್ಯಗಳನ್ನು ಪಡೆಯುತ್ತಿರುವ ಮುಖ್ಯಮಂತ್ರಿಯೊಬ್ಬ ದಿನಪ್ರತಿ ಏನು ಮಾಡುತ್ತಿದ್ದಾನೆ, ಆತನ ಕೆಲಸವೇನು ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಎಲ್ಲಾ ಜನರಿಗೂ ತಿಳಿಯಬೇಕು ಎನ್ನುವ ವಾಸ್ತವ ತಿಳಿಯುವ ಕಾರಣಕ್ಕಾಗಿಯೇ ಮಾಧ್ಯಮಗಳು ಇವರ ಹಿಂದೆ ಮುಂದೆ ಓಡಾಡುತ್ತಿರುವುದು.

ಆದರೆ ಇದೀಗ ಮುಖ್ಯಮಂತ್ರಿಗಳು ಜನರ ರಕ್ಷಣೆಗಾಗಿ ಇರುವ ಪೋಲೀಸರನ್ನು ತಮ್ಮ ಪರ್ಸನಲ್ ಸೆಕ್ಯುರಿಟಿ ಗಾರ್ಡ್ ಗಳಂತೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಾಪು ಪೋಲೀಸ್ ಠಾಣೆಯ ಎಸ್.ಐ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಇದೀಗ ಖಾಸಗಿ ರೆಸಾರ್ಟ್ ಗೆ ಸೆಕ್ಯುರಿಟಿ ಗಾರ್ಡ್ ಗಳಂತೆ ಕಾವಲು ಕಾಯಲಾರಂಭಿಸಿದ್ದಾರೆ.

ಕೇವಲ ರೆಸಾರ್ಟ್ ಗೆ ಮಾತ್ರ ಕಾವಲು ಒದಗಿಸುವುದನ್ನು ಬಿಟ್ಟು ಇದೀಗ ರೆಸಾರ್ಟ್ ನ ಅಕ್ಕಪಕ್ಕದಲ್ಲಿರುವ ಮನೆ,ಮಠಗಳಿಗೂ ಪೋಲೀಸರ ಸೆಕ್ಯುರಿಟಿ ಹಾವಳಿ ಶುರುವಾಗಿದೆ.

ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನೆಂಟರಿಷ್ಟರು ಬರಬೇಕಾದರೂ ಪೋಲೀಸರ ಅನುಮತಿ ಕೇಳಬೇಕಾದ ಸ್ಥಿತಿ ಕಾಪುವಿನಲ್ಲಿ ನಿರ್ಮಾಣಗೊಂಡಿದೆ.

ಈ ನಡುವೆ ಜನರ ತೆರಿಗೆ ಹಣದಲ್ಲಿರುವ ಮುಖ್ಯಮಂತ್ರಿಗಳ ಪ್ರತಿಯೊಂದು ಚಲನವಲನಗಳನ್ನು ಗಮನಿಸಬೇಕಾದ ಜವಾಬ್ದಾರಿ ಇರುವ ಮಾಧ್ಯಮಗಳ ಮಂದಿ ಇದೀಗ ರೆಸಾರ್ಟ್ ನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯುವ ಉದ್ದೇಶದಿಂದ ರೆಸಾರ್ಟ್ ಪಕ್ಕದಲ್ಲಿರುವ ಕೆಲವು ಮನೆಗಳಲ್ಲಿ ಠಿಕಾಣಿ ಹೂಡಿದ್ದಾರೆ.

ಈ ಬೆಳವಣಿಗೆಯಿಂದ ಇದೀಗ ಕಾಪು ಪೋಲೀಸರು ಮೈ ಪರಚಿಕೊಳ್ಳಲಾರಂಭಿಸಿದ್ದು, ಮಾಧ್ಯಮಗಳ ಮಂದಿಗೆ ಆಶ್ರಯ ನೀಡಿದ ಮನೆ ಮಂದಿಯನ್ನು ಬೆದರಿಸಲು ಆರಂಭಿಸಿದ್ದಾರೆ.

ಅಲ್ಲದೆ ಪೋಲೀಸ್ ಕೆಲಸ ಬಿಟ್ಟು ಮನೆಗಳ ರೆಕಾರ್ಡ್ ಹುಡುಕುವ ಕೆಲಸವನ್ನೂ ಆರಂಭಿಸಿದ್ದಾರೆ.

ಮಾಧ್ಯಮಗಳ ಮುಂದೆಯೇ ಮನೆ ಮಂದಿಯನ್ನು ಬೆದರಿಸುತ್ತಿರುವ ಕಾಪು ಪೋಲೀಸರ ಕ್ರಮ ಖಂಡನೀಯವಾಗಿದ್ದು, ಜನಪ್ರತಿನಿಧಿಗಳಿಗೆ ಬಕೇಟು ಹಿಡಿಯುವುದನ್ನು ಬಿಟ್ಟು ಪೋಲೀಸರು ತಮ್ಮ ಡ್ಯೂಟಿ ನಿರ್ವಹಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇಡೀ ಸಮಾಜವೇ ಪೋಲೀಸರಿಗೆ ತಮ್ಮ ಡ್ಯೂಟಿಯನ್ನು ನೆನಪಿಸುವ ಕೆಲಸವನ್ನು ನಡೆಸಲಿದೆ ಎನ್ನುವ ಮಾತೂ ಇದೀಗ ಪೋಲೀಸರ ವರ್ತನೆಯಿಂದ ಬೇಸತ್ತ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ