ಮಹಿಳೆಯ ಜೊತೆ ಅಶ್ಲೀಲ ವರ್ತನೆ, ಜೀವಬೆದರಿಕೆ , ಆರೋಪಿ ವಿರುದ್ಧ ಕ್ರಮಕ್ಕೆ ಕಡಬ ಪೋಲೀಸರ ಹಿಂಜರಿಕೆ

ಪುತ್ತೂರು ಮಾರ್ಚ್ 20: ಮಹಿಳೆಯೋರ್ವರಿಗೆ ಜೀವ ಬೆದರಿಕೆ ಹಾಗೂ ಅಶ್ಲೀಲವಾಗಿ ವರ್ತಿಸಿದ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ ಪೋಲೀಸರು ದೂರು ದಾಖಲಿಸಲು ಹಿಂದೇಟು ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಡಬದ ಬಿಳಿನೆಲೆ ನಿವಾಸಿ ಪುಷ್ಪಾವತಿ ಎನ್ನುವವರ ಮನೆಗೆ ಮಾರ್ಚ್ 15 ರ ರಾತ್ರಿ ಕಡಬದ ಕಾಂಗ್ರೇಸ್ ಮುಖಂಡರೊಬ್ಬರ ಪುತ್ರ ಪ್ರತೀಕ್ ಎನ್ನುವಾತ ಕುಡಿದ ಅಮಲಿನಲ್ಲಿ ನುಗ್ಗಿ ಪುಷ್ಪಾವತಿ ಹಾಗೂ ಆಕೆಯ ಎರಡು ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳ ಮುಂದೆ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಅಲ್ಲದೆ ಪುಷ್ಪಾವತಿ ಪತಿ ಕೇರಳದಲ್ಲಿ ಉದ್ಯೋಗದಲ್ಲಿರುವುದನ್ನು ತಿಳಿದಿರುವ ಆರೋಪಿ ಪ್ರತೀಕ್ ತಾನು ಆಕೆಯ ಮನೆಯಲ್ಲೇ ಮಲಗುತ್ತೇನೆ ಎಂದು ಹಠ ಹಿಡಿದಿದ್ದಾನೆ. ಅಲ್ಲದೆ ಈ ವಿಚಾರವನ್ನು ಹೊರಗೆ ತಿಳಿಸಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಮಹಿಳೆ ತಕ್ಷಣ ಕಡಬ ಪೋಲೀಸರಿಗೆ ರಾತ್ರಿಯೇ ಆರೋಪಿಯ ವಿರುದ್ಧ ದೂರವಾಣಿ ಕರೆ ಮಾಡಿ ದೂರು ನೀಡಿದ್ದರೂ ಪೋಲಿಸರು ಸ್ಥಳಕ್ಕೆ ಆಗಮಿಸಿಲ್ಲ. ಬಳಿಕ ಮರುದಿನ ಕಡಬ ಪೋಲೀಸ್ ಠಾಣೆಗೆ ಸ್ವತಹ‌ ತೆರಳಿ‌ ಪ್ರತೀಕ್ ವಿರುದ್ಧ ದೂರು ನೀಡಿದರೂ ಆರೋಪಿಯನ್ನು ಬಂಧಿಸುವುದು ಬಿಡಿ‌ ಕನಿಷ್ಟ ವಿಚಾರಣೆಯನ್ನೂ ನಡೆಸಿಲ್ಲ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಇದೀಗ ಪುಷ್ಪಾವತಿ ತನಗಾದ ಅನ್ಯಾಯದ ಕುರಿತು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆರೋಪಿ ಪ್ರತೀಕ್ ಕಡಬದ ಕಾಂಗ್ರೇಸ್ ಮುಖಂಡರೋರ್ವರ ಮಗನಾಗಿದ್ದು, ಜಿಲ್ಲೆಯ ಪ್ರಮುಖ ನಾಯಕರೋರ್ವರ ಒತ್ತಡದಿಂದಾಗಿ ಕಡಬ‌ ಪೋಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

Facebook Comments

comments