ಪೊಲೀಸರಲ್ಲದೆ ಇತರ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಲಾಠಿ ಪ್ರಹಾರ…..!

ಮಂಗಳೂರು : ಕರೋನಾ ಮಹಾಮಾರಿ ಹಿನ್ನಲೆ ದೇಶದಲ್ಲಿ ಲಾಕ್ ಡೌನ್ ಜಾರಿಗೆ ಬಂದ ಬಳಿಕ ಜನರು ದಿನನಿತ್ಯ ಅಗತ್ಯ ವಸ್ತುಗಳಿಗೆ ಪರದಾಡುವಂತಾಗಿದೆ. ಒಂದೆಡೆ ಕರೋನಾ ಭಯ ಇನ್ನೊಂದೆಡೆ ಪೊಲೀಸರ ಭಯದಿಂದ ಸಾರ್ವಜನಿಕರು ಹೈರಾಣಾಗಿ ಹೋಗಿದ್ದಾರೆ.

ಲಾಕ್ ಡೌನ್ ಜಾರಿಯನ್ನು ಪೊಲೀಸರು ಕೋಮುಗಲಭೆ ಸಂದರ್ಭದಲ್ಲಿ ಬಳಸುವ ಕರ್ಪ್ಯೂನಂತೆ ಬಳಸುತ್ತಿರುವ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮನೆಯಿಂದ ಹೊರಗೆ ಬಂದ ಸಾರ್ವಜನಿಕರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಮನೆಯಿಂದ ಹೊರ ಬಂದವರನ್ನು ಸರಿಯಾಗಿ ವಿಚಾರಿಸದೇ ನೇರವಾಗಿ ಲಾಠಿ ಬೀಸುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ಇದೇ ರೀತಿ ಪೋಲೀಸ್ ಕುಟುಂಬದವರಿಗೂ ಲಾಠಿ ರುಚಿ ತೋರಿಸಿದರೆ ಏನಾಗಬಹುದು ಎನ್ನುವ ಆಕ್ರೋಶವನ್ನೂ ಜನ ತೋರಿಸಲಾರಂಭಿಸಿದ್ದಾರೆ.

ಕರೋನಾ ಮಹಾಮಾರಿಯ ಹಿನ್ನಲೆ ಸೊಂಕು ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರು 21 ದಿನಗಳ ದೇಶದಾದ್ಯಂತ ಲಾಕ್ ಡೌನ್ ಗೆ ಕರೆ ನೀಡಿದ್ದಾರೆ. ಈ ಹಿನ್ನಲೆ ದೇಶದಾದ್ಯಂತ ಜನ ಸಂಚಾರದ ಮೇಲೆ ಎಲ್ಲಾ ರಾಜ್ಯಗಳು ಕರ್ಪ್ಯೂ ಹೇರಿವೆ. ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಮನೆಯಿಂದ ಹೊರಗಡೆ ಬರದಂತೆ ಮನವಿ ಮಾಡಿದ್ದಾರೆ. ಆದರೆ ಜನರ ದಿನನಿತ್ಯ ಅಗತ್ಯ ವಸ್ತುಗಳಿಗೆ ಮನೆಯಿಂದ ಹೊರಗಡೆ ಬಂದರೂ ಕೂಡ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ನಡುವೆ ಕರ್ನಾಟಕದಲ್ಲಿ ಪೊಲೀಸರಲ್ಲದೆ ಇತರ ಸರಕಾರಿ ಅಧಿಕಾರಿಗಳು ಕೂಡ ಲಾಠಿ ಬೀಸಲಾರಂಭಿಸಿದ್ದು, ಸದ್ಯ ಇಡೀ ದೇಶದಲ್ಲಿ ಜನರಿಗೆ ಕರೋನಾ ಭಯಕ್ಕಿಂತ ಪೊಲೀಸರ ಲಾಠಿ ಚಾರ್ಜ್ ಹೆಚ್ಚು ಭಯ ತರಿಸಿದೆ.ಈಗ ದಿನಂಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪೊಲೀಸರು ಮನೆಯಿಂದ ಹೊರಗೆ ಬಂದ ಜನರಿಗೆ ವಿವಿಧ ರೀತಿಯ ಶಿಕ್ಷೆಗಳನ್ನು ನೀಡುತ್ತಿರುವುದು ಕಾಣ ಸಿಗುತ್ತಿದೆ. ಕರೋನಾ ಜಾಗೃತಿ ಮಾಡಬೇಕಾದ ಮಾಧ್ಯಮಗಳಲ್ಲಿ ಬರೇ ಪೊಲೀಸರ ಲಾಠಿ ವಿಡಿಯೋಗಳು ಹರಿದಾಡುತ್ತಿವೆ.