ಮಂಗಳೂರು ಸೆಪ್ಟೆಂಬರ್ 21: ದನಗಳನ್ನು ಕದ್ದು ಮಾಂಸ ಮಾಡಿ ಮಾರಾಟ ಮಾಡಿ ತಿರುಗಾಡುತ್ತಿದ್ದ ದನಗಳ್ಳರ ಮೇಲೆ ಇದೀಗ ಮಂಗಳೂರು ಪೊಲೀಸರು ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ದನಗಳ್ಳತನ ಮಾಡಿ ಸಿಕ್ಕಿಹಾಕಿಕೊಂಡರು ಮಾಮೂಲಿ ಕೇಸ್ ನಿಂದ ಬಚಾವ್ ಆಗುತ್ತಿದ್ದವರ ಮೇಲೆ ಇದೀಗ ಪೊಲೀಸರು ಸಂಘಟಿತ ಅಪರಾಧ ತಡೆ ಕಾಯ್ದೆ( KCOCA Act ) ದಾಖಲಿಸಲು ಪ್ರಾರಂಭಿಸಿದ್ದಾರೆ . ಈ ಕಾಯ್ದೆ ಅಡಿ ಪ್ರಕರಣ ದಾಖಲಾದರೆ ಜಾಮೀನು ಕನಸಿನ ಮಾತು.


ಇತ್ತೀಚೆಗೆ ಬಂಟ್ವಾಳ ತಾಲೂಕಿನ ತುಂಬೆ ಮತ್ತು ಉಪ್ಪಿನಂಗಡಿಯ ಪೆರ್ನೆಯಲ್ಲಿ ಹಟ್ಟಿಯಿಂದ ದನಗಳನ್ನು ಕದ್ದೊಯ್ದು ಮಾಂಸ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ತಡೆ ಕಾಯ್ದೆ( KCOCA Act ) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಬಂಟ್ವಾಳ ತುಂಬೆ ಬಳಿ ಮನೆಯ ಹಟ್ಟಿಯಿಂದ ಗೋವನ್ನು ಕದ್ದು ಪಕ್ಕದ ತೋಟದಲ್ಲಿ ಮಾಂಸಗೈದ ಬಗ್ಗೆ ಆಗಸ್ಟ್ 15ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ:125/2025, ಕಲಂ: 303(2), BNS, ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48), ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಎಂಬವರನ್ನು ಸೆ.5ರಂದು ದಸ್ತಗಿರಿ ಮಾಡಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಇದೇ ಆರೋಪಿಗಳು ಸೆಪ್ಟೆಂಬರ್ 4ರಂದು ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲು ಮನೆಯೊಂದರ ಹಟ್ಟಿಯಿಂದ ಸಾಕು ದನವನ್ನು ಕದ್ದು ಅಲ್ಲಿಯೇ ಪಕ್ಕದ ತೋಟದಲ್ಲಿ ಮಾಂಸಗೈದ ಬಗ್ಗೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ತನಿಖೆ ಸಂದರ್ಭದಲ್ಲಿ ಎರಡೂ ಕೃತ್ಯಗಳನ್ನು ಒಂದೇ ತಂಡ ನಡೆಸಿರುವುದು ಕಂಡುಬಂದಿತ್ತು. ಎರಡಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದರೆ ಅಂಥವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ದ.ಕ. ಎಸ್ಪಿ ಅರುಣ್ ಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

Share Information