ಮಂಗಳೂರು ಮಾರ್ಚ್ 17: ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಕೇಳಿಬಂದಿರುವ ಅನುಚಿತ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತ ಆರೋಪಿಯ ಪತ್ನಿಯು ಠಾಣೆಯ ಇನ್ ಸ್ಪೆಕ್ಟರ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಉತ್ತರ ಉಪವಿಭಾಗ (ಪಣಂಬೂರು)ದ ಎಸಿಪಿಗೆ ಸೂಚಿಸಿದ್ದರು. ಇದೀಗ ಎಸಿಪಿ ಅವರು ತನಿಖೆ ನಡೆಸಿ ಪೊಲೀಸ್ ಆಯುಕ್ತರಿಗೆ ವರದಿಯನ್ನು ನೀಡಿದ್ದಾರೆ.
ಸುಮತಿ ನಾಯಕ್ ಮತ್ತು ಅವರ ಸಹೋದರಿ ಪ್ರಪುಲ್ಲಾ ನಡುವೆ ತೀವ್ರ ಕೌಟುಂಬಿಕ ಕಲಹವಿದ್ದು, ಪರಸ್ಪರ ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಹೋದರಿಯೇ ಸುಮತಿ ವಿರುದ್ಧ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಇನ್ಸ್ಪೆಕ್ಟರ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ಮಹಿಳೆ ಅವಿತಾ ಮಿನೆಜಸ್. ಇವರ ಪತಿಯ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಆ ಪ್ರಕರಣಗಳಲ್ಲಿ ಒಂದರಲ್ಲಿ, ಅವರು ಮತ್ತು ಅವರ ಪತಿ ವ್ಯಕ್ತಿಯೊಬ್ಬರ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ, ಅವರ ಮತ್ತು ಅವರ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಈ ವೇಳೆ, ಆಕೆಗೆ ಇನ್ಸ್ ಪೆಕ್ಟರ್ ಕಿರುಕುಳ ನೀಡಿದ್ದಾರೆಂಬ ವಿಚಾರದಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಜೊತೆಗಿದ್ದ ಇಬ್ಬರು ಮೀಡಿಯಾದವರು ಮತ್ತು ಒಬ್ಬರು ವಕೀಲರನ್ನು ಪ್ರಶ್ನಿಸಿದ್ದು ಹಣ ಕೇಳಿರುವುದು ಮತ್ತು ಲೈಂಗಿಕ ಕಿರುಕುಳದ ಆರೋಪವನ್ನು ನಿರಾಕರಿಸಿದ್ದಾರೆ.
ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಈ ಮಹಿಳೆಯರು ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋದಲ್ಲಿರುವರಿಗೆ ಯಾವುದೇ ಸಂಬಂಧವಿಲ್ಲ. ಆದರೂ ಇನ್ಸ್ಪೆಕ್ಟರ್ ಅನುಚಿತವಾಗಿ ಮಾತನಾಡುತ್ತಿರುವ ಆಡಿಯೋ ಮತ್ತು ವೀಡಿಯೋ ತುಣುಕುಗಳು ಲಭ್ಯವಾಗಿವೆ. ಈ ಸಾಕ್ಷ್ಯಗಳಲ್ಲಿ ಇನ್ಸ್ಪೆಕ್ಟರ್ನ ಪ್ರಶ್ನಾರ್ಹ ನಡವಳಿಕೆ ಸ್ಪಷ್ಟವಾಗಿ ಕಂಡುಬಂದಿದೆ.
ಇದೇ ವೇಳೆ, ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಮಹಿಳೆಯರು ಘಟನೆ ಬಗ್ಗೆ ತನಿಖೆಗೆ ಪೊಲೀಸ್ ದೂರು ಕೊಡಲು ನಿರಾಕರಿಸಿದ್ದಾರೆ. ಆದರೆ ಇನ್ಸ್ ಪೆಕ್ಟರ್ ಆಗಿದ್ದುಕೊಂಡು ಮಹಿಳೆಯರ ಜೊತೆಗೆ ದುರ್ನಡತೆ ತೋರಿದ್ದಕ್ಕಾಗಿ ಸಂದೇಶ್ ಅವರನ್ನು ಕರ್ತವ್ಯದಿಂದ ಅಮಾನತು ಪಡಿಸಿದ್ದು ಸಮಗ್ರ ತನಿಖೆ ನಡೆಸಲು ಎಸಿಪಿಗೆ ಹೊಣೆ ವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.