ಮಂಗಳೂರು ಡಿಸೆಂಬರ್ 27: ದ್ವಿಚಕ್ರ ವಾಹನದಲ್ಲಿ ಯಾವುದೇ ದಾಖಲೆಗಳಿಲ್ಲದೆ ಗೋಮಾಂಸ ಸಾಗಾಟ ಮಾಡುತ್ತಿದ್ದವರನ್ನು ಇಬ್ಬರು ತಡೆದು ನಿಲ್ಲಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಿ ನಾರ್ಲಪದವು ರಸ್ತೆಯಲ್ಲಿ ಶನಿವಾರ ನಡೆದಿದೆ.

ಮುಲ್ಲರಪಟ್ನ ಮೂಲದ ಅಬ್ದುಲ್ ಸತ್ತಾರ್ ಎಂಬಾತ ತನ್ನ 11 ವರ್ಷದ ಪುತ್ರಿಯೊಂದಿಗೆ ಸುಮಾರು 19 ಕೆಜಿ ಗೋಮಾಂಸವನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದ. ವಾಹನದಲ್ಲಿ ಬಂದ ಇಬ್ಬರು ದ್ವಿಚಕ್ರವಾಹನವನ್ನು ತಡೆದು ವಿಚಾರಿಸಿದ್ದಾರೆ. ಈ ವೇಳೆ ಬೈಕ್ ಕೆಳಗೆ ಬಿದ್ದು, ಸೈಲೆನ್ಸರ್ ತಗುಲಿ ಬಾಲಕಿಯ ಕಾಲಿಗೆ ಸುಟ್ಟ ಗಾಯಗಳಾಗಿವೆ. ಸತ್ತಾರ್ ಬೈಕ್ ಬಿಟ್ಟು ಪರಾರಿಯಾಗಿದ್ದು,ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಯಾವುದೇ ಬಿಲ್ ಇಲ್ಲದೆ ಅಕ್ರಮವಾಗಿ ಗೋಮಾಂಸ ಸಾಗಣೆ ಮಾಡಿದ್ದಕ್ಕಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ನೈತಿಕ ಪೊಲೀಸ್ ಗಿರಿ ಮಾಡಿರುವುದಕ್ಕಾಗಿ ಸುಮಿತ್ ಮತ್ತು ರಜತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಿತ್ ಮತ್ತು ರಜತ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಿಸಲಾಗಿದೆ. ಗಾಯಗೊಂಡ ಬಾಲಕಿಯ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇಬ್ಬರು ನಮ್ಮನ್ನು ತಡೆದು ತಂದೆಗೆ ಹೊಡೆದಿದ್ದಾರೆಂದು ಹೇಳಿಕೆ ನೀಡಿದ್ದಾಳೆ. ಸತ್ತಾರ್ ನನ್ನ ವಶಕ್ಕೆ ಪಡೆದ ನಂತರ ಆತ ಅದನ್ನು ಎಲ್ಲಿಂದ ಮಾಂಸ ತರುತ್ತಿದ್ದನೆಂದು ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



