ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ

ಪುತ್ತೂರು ಎಪ್ರಿಲ್ 23: ಪ್ರಧಾನಿ ನರೇಂದ್ರ ಮೋದಿ ಪುತ್ತೂರು ಮಾಜಿ ಶಾಸಕ ರಾಮ್ ಭಟ್ ರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪುತ್ತೂರಿನಲ್ಲಿರುವ ರಾಮ ಭಟ್ ಮನೆಗೆ ಪ್ರಧಾನಿ ಅವರ ಆಪ್ತ ಸಹಾಯಕರು ಮೊದಲು ಕರೆ ಮಾಡಿ, ಈಗ ದೇಶದ ಪ್ರಧಾನ ಮಂತ್ರಿಯವರು ತಮ್ಮ ಜತೆ ಮಾತನಾಡುತ್ತಾರೆ ಎಂದು ತಿಳಿಸಿದರು.

ನಂತರ ಮೋದಿ ಅವರು ಪೋನ್ ಸಂಪರ್ಕಕ್ಕೆ ಬಂದರು. ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡು ಮಾತು ಆರಂಭಿಸಿದ ಪ್ರಧಾನಿಯವರು ಬಳಿಕ ರಾಮ ಭಟ್ ಅವರ ಆರೋಗ್ಯ ವಿಚಾರಿಸಿದರು.

ಪ್ರಧಾನಿ ಕಛೇರಿಯಿಂದ ರಾಮ್ ಭಟ್ ಮನೆಗೆ ಕರೆ ಬಂದಿದ್ದು, ಹಿಂದಿಯಲ್ಲೇ ರಾಮ್ ಭಟ್ ಅವರ ಆರೋಗ್ಯವನ್ನು ಪ್ರಧಾನಿ ಮೋದಿ ವಿಚಾರಿಸಿದ್ದಾರೆ. ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಮೋದಿಯವರು ಕರೆ ಮಾಡಿರುವುದು ಸಂತಸ ತಂದಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನಿಗೆ ಇಂಥಹ ಮಾತುಗಳು ಉತ್ತೇಜನ ನೀಡುತ್ತದೆ ಎಂದು ರಾಮ್ ಭಟ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಜತೆ ಮೋದಿ ಮಾತನಾಡಿದ್ದನ್ನು ರಾಮ ಭಟ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿದ್ದಾರೆ. ರಾಜ್ಯದ ಇಬ್ಬರು ಹಿರಿಯರಾದ ಡಿ.ಎಚ್. ಶಂಕರ ಮೂರ್ತಿ ಮತ್ತು ರಾಮ ಭಟ್ ಅವರಿಗೆ ಫೋನ್ ಮಾಡಿ ಆಶೀರ್ವಾದ ಪಡೆದಿದ್ದಾರೆ ಎಂದು ಕಟೀಲ್‌ ತಿಳಿಸಿದ್ದಾರೆ.

ಪುತ್ತೂರಿನ ಮೊತ್ತ ಮೊದಲ ಬಿಜೆಪಿ‌ ಶಾಸಕ‌ ಹಾಗೂ ರಾಜ್ಯದಲ್ಲಿ ಆ ಸಮಯದಲ್ಲಿ ಬಿಜೆಪಿಯ ಇಬ್ಬರು ಶಾಸಕರ ಪೈಕಿ ರಾಮ್ ಭಟ್ ಒಬ್ಬರಾಗಿದ್ದು, ಇನ್ನೊಬ್ಬರು ಸದ್ಯ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪರಾಗಿದ್ದಾರೆ.