ಮಂಗಳೂರು ಜನವರಿ 31: ಪಿಲಿಕುಳ ನಿಸರ್ಗಧಾಮದ ಅವ್ಯವಸ್ಥೆಗೆ ಹೈಕೋರ್ಟ್ ಗರಂ ಆಗಿದ್ದು, ಪಿಲಿಕುಳದಲ್ಲಿರುವ ಮೃಗಾಲಯದ ಅವ್ಯವಸ್ಥೆಗೆ ಕಂಡ ನ್ಯಾಯಾಧೀಶರು ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ತಕ್ಷಣ ಮೃಗಾಲಯ ಬಂದ್ ಮಾಡಿ ಅಂತ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ.

ಪಿಲಿಕುಳ ನಿಸರ್ಗಧಾಮ ಕರ್ನಾಟಕದಲ್ಲೇ ಅತ್ಯಂತ ವಿಶಿಷ್ಠವಾದ ಮೃಗಾಲಯ, ಸುಮಾರು 370 ಎಕರೆಗಳಷ್ಟು ವಿಶಾಲವಾಗಿ ಹಬ್ಬಿರೋ ಈ ಪಾರ್ಕ್, ಈ ಜಾಗವನ್ನ ಇಂದು ಅಂತರಾಷ್ಟ್ರೀಯ ಮಟ್ಟದ ಜೈವಿಕ ಉದ್ಯಾನವನವಾಗಿ ರೂಪಿಸಲಾಗಿದೆ. ಆದರೆ ಪಿಲಿಕುಳ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದ್ದು, ಪಿಲಿಕುಳದ ಅವ್ಯವಸ್ಥೆ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಇಲ್ಲಿನ ಅವ್ಯವಸ್ಥೆ,ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಧೀಶರೇ ಶಾಕ್ ಆಗಿದ್ದಾರೆ.

ತುಕ್ಕು ಹಿಡಿದ ಪಂಜರ, ಕಲುಷಿತ ನೀರು, ಅಶುಚಿ ವಾತಾವರಣ, ಸರಿಯಾದ ಆಹಾರ ಇಲ್ಲದೇ ಇರೋದು, ಇದು ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪಿಲಿಕುಳ ಮೃಗಾಲಯದ ಕರ್ಮ ಕಾಂಡಗಳು ಹೈಕೋರ್ಟ್ನಲ್ಲಿ ಹೊರಬಿದ್ದಿವೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ, ಅಲ್ಲಿ ಸರಿಯಾದ ಭದ್ರತೆಯೇ ಇಲ್ಲ. ಅಶುಚಿಯಾದ ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಕೆಂಡಾಮಂಡಲವಾಗಿದೆ.
ಈ ಪಾರ್ಕ್ನ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಅಂದ್ರೆ ಸದ್ಯ ಯಾವುದೇ ಪರವಾನಗಿ ಇಲ್ಲದೆ ಪಿಲಿಕುಳ ಮೃಗಾಲಯ ನಡೀತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ. ಮಲಿನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಪರವಾನಗಿ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ. ಅದು ಪರಿಶೀಲನೆಯಲ್ಲಿದೆ ಎಂದು ಸಮರ್ಥನೆ ನೀಡಿದ್ದಾರೆ. ನ್ಯಾಯಾಲಯ ಮಾತ್ರ ಇದನ್ನ ಒಪ್ಪಿಲ್ಲ. ಪ್ರಾಣಿಗಳಿಗೆ ರಕ್ಷಣೆ ನೀಡಲಾಗದಿದ್ರೆ ಅದನ್ನು ಮುಚ್ಚಿಬಿಡಿ ಅಂತಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಫೆಬ್ರವರಿ 5ಕ್ಕೆ ಅರ್ಜಿಯ ವಿಚಾರಣೆ ಮುಂದೂಡಲಾಗಿದೆ.