LATEST NEWS
ರೇಪ್ ಆರೋಪಿ ಆಟೋ ಚಾಲಕನ ಕ್ಷಮೆ ಕೇಳಿದ ಪೊಲೀಸ್ ಆಯುಕ್ತ..!
ಹೈದರಾಬಾದ್, ಫೆಬ್ರವರಿ 14: ತೆಲಂಗಾಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿದ್ದ ಬಿ. ಫಾರ್ಮಸಿ ವಿದ್ಯಾರ್ಥಿನಿಯ ಅಪಹರಣ ಮತ್ತು ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದ ಅಸಲಿಯತ್ತನ್ನು ತೆಲಂಗಾಣ ಪೊಲೀಸರು ಬಹಿರಂಗಪಡಿಸಿದ್ದಾರೆ. ಅಸಲಿಗೆ ಈ ಪ್ರಕರಣ ನಾಟಕೀಯ ಎಂದು ತಿಳಿದುಬಂದಿದೆ.
ಯುವತಿಯ ತಾಯಿ ದೂರು ನೀಡಿದ ಕೇವಲ ಎರಡೇ ಗಂಟೆಯಲ್ಲಿ ಪ್ರಕರಣವನ್ನು ರಾಚಕೊಂಡ ಪೊಲೀಸರು ಭೇದಿಸಿದ್ದಾರೆ. ಫೆ. 10ರಂದು ಆರ್ಎಲ್ ನಗರದಿಂದ ಪೊಲೀಸ್ ಸಹಾಯವಾಣಿ 100ಗೆ ಕರೆ ಬಂತು. ಕೀಸರ ಪೊಲೀಸರು ಕರೆ ಸ್ವೀಕರಿಸಿದರು. ಆಟೋ ಡ್ರೈವರ್ ಒಬ್ಬರ ಫಾರ್ಮಾ ಕಾಲೇಜು ವಿದ್ಯಾರ್ಥಿಯನ್ನು ಅಪಹರಿಸಿದ್ದಾನೆಂದು ಹೇಳಿದರು. ಮಾಹಿತಿ ತಿಳಿದ ಕೀಸರಾ ಗಸ್ತು ಪಡೆ ಮತ್ತು ಇನ್ಸ್ಪೆಕ್ಟರ್ ಜೆ. ನರೇಂದ್ರ ಗೌಡ ಘಟನಾ ಸ್ಥಳಕ್ಕೆ ತೆರಳಿದರು ಮತ್ತು ಸಂತ್ರಸ್ತೆಯ ಪಾಲಕರು ಭೇಟಿ ಮಾಡಿದರು ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಾಥಮಿಕ ವರದಿಯ ಪ್ರಕಾರ 19 ವರ್ಷದ ಬಿ. ಫಾರ್ಮಸಿ ವಿದ್ಯಾರ್ಥಿನಿ ರಾಂಪಲ್ಲಿಯ ರಸ್ತೆಯಲ್ಲಿ ಕಾಲೇಜ್ ಬಸ್ನಿಂದ ಇಳಿದು ಇತರರೊಂದಿಗೆ ಸಂಜೆ 5.40ಕ್ಕೆ ಆಟೋ ಏರಿದಳು. ಸುಮಾರು 6.01ಕ್ಕೆ ತಾಯಿಗೆ ಕರೆ ಮಾಡಿ ಆಟೋ ಚಾಲಕ ಆರ್ಎಲ್ ನಗರದಲ್ಲಿ ನಿಲ್ಲಿಸಲಿಲ್ಲ ಮತ್ತು ಕಣ್ಣೀರಿಟ್ಟರು ಕ್ಯಾರೆ ಎನ್ನದೇ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ. ಇದಾದ ಬಳಿಕ ಆಕೆಯ ಮೊಬೈಲ್ ಔಟ್ ಆಫ್ ರೀಚ್ ಆಗಿದೆ.
ಇದಾದ ಬಳಿಕ ಯುವತಿ ಅನ್ನೋಜಿಗುಡದ ಸರ್ವೀಸ್ ರಸ್ತೆಯಲ್ಲಿರುವ ಬೆಥುಲ್ ಚರ್ಚ್ನ ಪ್ರತ್ಯೇಕ ಪ್ರದೇಶದಲ್ಲಿ ನಿಂತಿರುತ್ತಾಳೆ. ಆಕೆ ಅರೆಬೆತ್ತಲೆಯಾಗಿರುತ್ತಾಳೆ ಮತ್ತು ನೋಡಲು ಆಘಾತವಾಗುವಂತೆ ಕಾಣುತ್ತಿರುತ್ತಾಳೆ. ಬಳಿಕ ಪೊಲೀಸರು ಪಾಲಕರೊಂದಿಗೆ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸುತ್ತಾರೆ. ದೂರಿನ ಆಧಾರದ ಮೇಲೆ ಕೀಸರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿ, ತನಿಖೆಯ ಆರಂಭವಾಗುತ್ತದೆ. ಯುವತಿಯ ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಆಕೆಯ ಹೇಳಿಕೆಯನ್ನು ಪಡೆದು ಸೂಕ್ತ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗುತ್ತದೆ.
#RachakondaPolice #cracked the pharmacy student #kidnap case, proved as #false.@TelanganaDGP @TelanganaCOPs @cyberabadpolice @SwatiLakra_IPS @SumathiIPS @ts_womensafety @TS_SheTeams @Keesaraps @GhatkesarPS @DcpMalkajgiri pic.twitter.com/WIqsQ50bzJ
— Rachakonda Police (@RachakondaCop) February 13, 2021
ಈ ಪ್ರಕರಣ ಭಾರಿ ಸಂಚಲನ ಸೃಷ್ಟಿ ಮಾಡುತ್ತದೆ. ಜನರಿಗೆ ಮಾತ್ರವಲ್ಲದೇ ಸ್ವತಃ ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್, ಹೆಚ್ಚುವರಿ ಆಯುಕ್ತ ಜಿ ಸುಧೀರ್ ಬಾಬು, ಉಪ ಆಯುಕ್ತ ರಕ್ಷಿತ ಕೃಷ್ಣರಿಗೆ ಪ್ರಕರಣದ ಮೇಲೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಅದರ ಮುಂದುವರಿದ ಭಾಗವಾಗಿ ವಿಶೇಷ ತಂಡವೊಂದನ್ನು ರಚಿಸಿ ತನಿಖಾ ಆಖಾಡಕ್ಕೆ ಇಳಿಯುತ್ತಾರೆ.
ಬಳಿಕ ಆಟೋ ಸಂಘಟನೆಯ ನೆರವಿನೊಂದಿಗೆ ಯುವತಿ ಏರಿದ್ದ ಆಟೋ ಬೇಟೆಗೆ ಇಳಿಯುತ್ತಾರೆ. ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೊನೆಗೂ ಆಟೋವನ್ನು ಪತ್ತೆಹಚ್ಚುತ್ತಾರೆ. ಸುಮಾರು 100 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವಾಗ ಸ್ವತಃ ಪೊಲೀಸರಿಗೆ ಪ್ರಕರಣ ನಿಜ ಸ್ವರೂಪ ತಿಳಿದು ಶಾಕ್ ಆಗುತ್ತದೆ.
ಅನೇಕ ಸಂಗತಿಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಸಂತ್ರಸ್ತೆಯನ್ನೇ ಮತ್ತೊಮ್ಮೆ ವಿಚಾರಣೆ ನಡೆಸುತ್ತಾರೆ. ಈ ವೇಳೆ ತಪ್ಪೊಪ್ಪಿಕೊಳ್ಳುವ ಯುವತಿ, ಕೌಟಂಬಿಕ ಸಮಸ್ಯೆಯಿಂದಾಗಿ ಮನೆ ಬಿಡುವ ನಿರ್ಧಾರಕ್ಕೆ ಯುವತಿ ಬಂದಿರುತ್ತಾಳೆ. ತಾಯಿಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ತೆರಳುತ್ತಾಳೆ. ಎಲ್ಲಿ ಪೊಲೀಸರು ಈ ಪ್ರಕರಣದಲ್ಲಿ ಮಧ್ಯ ಬರುತ್ತಾರೋ ಎಂಬ ಭಯದಿಂದ ಯುವತಿ ಒಂದು ಸುಳ್ಳು ಕತೆಯನ್ನೇ ಹೆಣೆಯುತ್ತಾಳೆಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಆಟೋ ಚಾಲಕ ಯುವತಿಯನ್ನು ಮುಂದಿನ ನಿಲ್ದಾಣದಲ್ಲಿ ಬಿಟ್ಟು ಹೋಗಿರುತ್ತಾನೆ. ಬಳಿಕ ಯುವತಿ ಗಾಟ್ಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದು ಹೋಗುವಾಗ ಮತ್ತೆ ಆಟೋ ಏರಿ ಅನ್ನೋಜಿಗುಡದಲ್ಲಿ ಇಳಿದು ಸ್ವಲ್ಪ ದೂರು ನಡೆಯುತ್ತಾಳೆ. ಯುವತಿ ತಾಯಿ ನೀಡಿದ ದೂರಿನ ಮೇಲೆ ಪೊಲೀಸರು ಯುವತಿಯ ಮೊಬೈಲ್ ನಂಬರ್ಗೆ ಕರೆ ಮಾಡಿ ಮೊಬೈಲ್ ಟವರ್ ಲೊಕೇಶನ್ ಕೇಳುತ್ತಾರೆ. ಮೊದಲೇ ಆಟೋ ಡ್ರೈವರ್ ಮೇಲಿದ್ದ ಸಿಟ್ಟಿನಿಂದ ಯುವತಿ ಸುಳ್ಳು ಕತೆಯನ್ನು ಕಟ್ಟಿ ನಡೆಯದೇ ಇರುವ ಅಪರಾಧವನ್ನು ಸೃಷ್ಟಿ ಮಾಡುತ್ತಾಳೆ ಎಂದು ಪೊಲೀಸರು ಹೇಳಿದ್ದಾರೆ.
ಅಷ್ಟರಲ್ಲಾಗಲೇ ಟಿವಿ ಮಾಧ್ಯಮಗಳಲ್ಲಿ ಫಾರ್ಮಸಿ ವಿದ್ಯಾರ್ಥಿಯನ್ನು ಆಟೋ ಡ್ರೈವರ್ ಅಪಹರಿಸಿ, ಅತ್ಯಾಚಾರ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿರುತ್ತದೆ. ತಾಯಿಗೂ ಸಹ ಅದೇ ರೀತಿ ಹೇಳಿರುತ್ತಾಳೆ. ಹೀಗಾಗಿ ಆಟೋ ಚಾಲಕನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ, ಆತನ ತಪ್ಪು ಏನು ಇಲ್ಲ ಎಂದು ಗೊತ್ತಾದ ಬಳಿಕ ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್, ಚಾಲಕನಿಗೆ ಮತ್ತು ಚಾಲಕರ ಸಂಘಟನೆಗೆ ಕ್ಷಮೆ ಕೋರುವ ಮೂಲಕ ದೊಡ್ಡತನ ಪ್ರದರ್ಶಿಸಿದ್ದಾರೆ.