ಬಂಟ್ವಾಳ ಸೆಪ್ಟೆಂಬರ್ 06: ಕೊಳವೆ ಬಾವಿ ಮಂಜೂರು ಮಾಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಪ ಇಂದು ಲಂಚ ಸ್ವೀಕರಿಸುತ್ತಿದ್ದಾಗ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಬಿಲ್ ಕಲೆಕ್ಟರ್ ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಪೆರುವಾಯಿ ಗ್ರಾಮಕ್ಕೆ ಸಂಬಂಧಪಟ್ಟ ದೂರುದಾರರು ತಮ್ಮ ಜಾಗಕ್ಕೆ ಕೊಳವೆಬಾವಿ ಮಂಜೂರಾತಿಗಾಗಿ 2024ರಲ್ಲಿ ಪೆರುವಾಯಿ ಗ್ರಾಮ ಪಂಚಾಯತ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಸರಿಯಾಗಿ ಪ್ರತಿಕ್ರಿಯೆ ನೀಡಿರುವುದಿಲ್ಲ.


ದೂರುದಾರ ಮಾವನಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು, ಅವರಿಗೆ ಅಸೌಖ್ಯ ಇದ್ದುದರಿಂದ ಫಿರ್ಯಾದಿದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್‌ಗೆ ಹೋಗಿ ವಿಚಾರಿಸಿಕೊಂಡು ತಿಳಿಸಿದ್ದಾರೆ. ಈ ಹಿನ್ನಲೆ 02.09.2025 ರಂದು ಪೆರುವಾಯಿ ಗ್ರಾಮ ಪಂಚಾಯತ್‌ಗೆ ಹೋಗಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನೆಫಿಸ್ಸಾ ರವರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ವಿಚಾರಿಸಿದಾಗ ‘ನಿಮಗೆ ಬೋರ್‌ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡ್ಲಿಕ್ಕೆ ಇದೆ, ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಹೇಳಿರುತ್ತಾರೆ. ಫಿರ್ಯಾದಿದಾರರು ತನ್ನಲ್ಲಿ ಅಷ್ಟು ಹಣ ಇಲ್ಲ ಎಂದು ಹೇಳಿ ವಾಪಾಸು ಬಂದಿರುತ್ತಾರೆ.
ಪಂಚಾಯತ್ ಅಧ್ಯಕ್ಷೆ ನಫಿಸಾ ಅವರು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಬೋರ್‌ವೆಲ್ ಹಾಕಿಸಿ ಕೊಡಲು ರೂ 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಶನಿವಾರ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರು ರೂ.10,000 ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಇವರಿಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಮಂಗಳೂರು ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿ ಡಾ.ಗಾನ.ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್ಪೆಕ್ಟರ್ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್, ಸಿಬ್ಬಂದಿ ಮಹೇಶ್, ರಾಜಪ್ಪ, ರಾಧಾಕೃಷ್ಣ, ಆದರ್ಶ್ , ರಾಮ ನಾಯ್ಕ, ವಿವೇಕ್, ಪ್ರವೀಣ್,ಗಂಗಣ್ಣ, ನಾಗಪ್ಪ,ಮಾಹದೇವ, ಪವಿತ್ರ, ದುಂಡಪ್ಪ, ರುದ್ರಗೌಡ,ರಾಜಶೇಖರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Share Information