ಉಡುಪಿ ಮಾರ್ಚ್ 01:ಪೊಲೀಸ್ ಇಲಾಖೆ ಆಯೋಜಿಸಿದ್ದ ಪೊಲೀಸ್ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಕುಂದಾಪುರ ಗ್ರಾಮಾಂತರ ಠಾಣೆಯ ಎಸ್ ಐ ನಾಸಿರ್ ಹುಸೇನ್ ಮೃತಪಟ್ಟ ಘಟನೆ ಇಂದು ರವಿವಾರ ನಡೆದಿದೆ. ಹೃದಯಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಡ್ರಗ್ಸ್ ಮುಕ್ತ ಕರ್ನಾಟಕ ಧ್ಯೇಯದೊಂದಿಗೆ “ಜಿಲ್ಲಾ ಪೊಲೀಸ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಘೋಷ ವಾಕ್ಯದೊಂದಿಗೆ ಪೊಲೀಸ್ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದ ವೇಳೆ ನಗರದ ತಾಲೂಕು ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಪಕ್ಕದಲ್ಲೇ ಇದ್ದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅಲ್ಲಿನ ವೈದ್ಯರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
ಚಿಕ್ಕಮಗಳೂರು ಮೂಲದ 58 ರ ಹರೆಯದ ನಾಸಿರ್ ಅವರು 2010 ಬ್ಯಾಚ್ ನ ಪೊಲೀಸ್ ಅಧಿಕಾರಿಯಾಗಿದ್ದರು. ನಾಸಿರ್ ಹುಸೇನ್ ಅವರು ಉಡುಪಿ ಜಿಲ್ಲೆಯ ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ, ಕಾರ್ಕಳ ಗ್ರಾಮಾಂತರ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.