ಉಡುಪಿ ಡಿಸೆಂಬರ್ 07: ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಭೇಟಿ ನೀಡಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.

ಪರ್ಯಾಯ ಪುತ್ತಿಗೆ ಮಠದ ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿರುವ ಪವನ್ ಕಲ್ಯಾಣಗೆ ಪರ್ಯಾಯ ಪುತ್ತಿಗೆ ಮಠದಿಂದ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಅವರು ಕನಕನ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದರು. ಅನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೃಷ್ಣ ಮಠದ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ಬಳಿಕ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ಭೇಟಿಯಾಗಿ ಸುವರ್ಣ ತೀರ್ಥಮಂಟಪದಲ್ಲಿ ಕೂತು ಪ್ರಸಾದ ಸ್ವೀಕರಿಸಿದರು. ಬಳಿಕ ಮಠದ ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಿದರು. ಈ ವೇಳೆ ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಪವನ್ ಕಲ್ಯಾಣ ಪುತ್ತಿಗೆ ಶ್ರೀಗಳ ಕಾರ್ಯಕ್ರಮವನ್ನು ಕೊಂಡಾಡಿದರು.
ನಾನು ಮೆಕಾಲೆಯ ಇಂಗ್ಲಿಷ್ ನಲ್ಲಿ ಮಾತನಾಡುತ್ತೇನೆ, ಸನಾತನ ಧರ್ಮವನ್ನು ಇಂಗ್ಲಿಷ್ ಭಾಷೆ ನಾಶ ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ, ಆದರೆ ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ವೇದ ಮತ್ತು ಗೀತೆಯಿಂದ ನಮ್ಮ ಸಂಸ್ಕೃತಿ ಉಳಿಸಿಕೊಂಡೆವು, ಸ್ವಾಮಿಗಳು ಆಹ್ವಾನ ನೀಡಿರುವುದು ಅಚ್ಚರಿ ಮೂಡಿದೆ, ನನಗೆ ಕರ್ಮ ಯೋಗದಲ್ಲಿ ನಂಬಿಕೆ ಇದೆ. ಫಲಗಳ ನಿರೀಕ್ಷೆ ನನಗೆ ಇಲ್ಲ, ನಾನು ವಿದ್ವಾಂಸರ ಕುಟುಂಬದಿಂದ ಬಂದವನಲ್ಲ ಭಕ್ತರ ಕುಟುಂಬದಿಂದ ಬಂದವನು, ಹನುಮ ಭಕ್ತರ ಕುಟುಂಬ ನಮ್ಮದು. ಹರೇ ರಾಮ ಹರೇ ಕೃಷ್ಣ ಎಂದು ನಮಗೆ ತಂದೆ ಕಳಿಸಿದರು.
ತಾರಕ ಮಂತ್ರ ನನ್ನ ಜೀವನದಲ್ಲಿ ಪವಾಡ ಮಾಡಿದೆ. ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಎಂದು ಹೇಳುತ್ತಾ ಬಂದ ಕುಟುಂಬ, ಮಾನಸಿಕವಾಗಿ ಕುಗ್ಗಿದಾಗಲೆಲ್ಲ ಈ ಮಂತ್ರ ನನ್ನನ್ನು ಮೇಲಕ್ಕೆ ಎತ್ತಿದೆ. ಉಡುಪಿ ವೈಕುಂಠವಾಗಿದ್ದು, ಆಧ್ಯಾತ್ಮದ ಸೆಳೆತ ಇಲ್ಲಿ ನಾನು ಕಂಡಿದ್ದೇನೆ ಇದು ಆಧ್ಯಾತ್ಮದ ಪವರ್ ಹೌಸ್ ಎಂದರು.