ಫರೀದ್ಕೋಟ್ , ಏಪ್ರಿಲ್ 16: ಪೊಲೀಸ್ ಇಲಾಖೆಯಲ್ಲಿ ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳ ನೆರವಿಗಾಗಿ ಇರುವ ‘ಮಹಿಳಾ ಮಿತ್ರ’ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು, ತನ್ನದೇ 5 ವರ್ಷದ ಮೊಮ್ಮಗಳ ಮೇಲೆ ಅಮಾನವೀಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಪಂಜಾಬ್ನ ಫರೀದ್ಕೋಟ್ನಲ್ಲಿ ವರದಿಯಾಗಿದೆ. ಸುಡುವ ಬಿಸಿಲಿನಲ್ಲಿ ಮಗುವಿನ ಕೈಕಾಲು ಕಟ್ಟಿ ದಂಡನೆ ನೀಡಿದ್ದ ಎಎಸ್ಐ (ASI) ಸರಬ್ಜಿತ್ ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಫರೀದ್ಕೋಟ್ನ ದೋಗರ್ ಬಸ್ತಿ ನಿವಾಸಿಯಾದ ಆರೋಪಿ ಸರಬ್ಜಿತ್ ಕೌರ್, ಬುಧವಾರ ಮಧ್ಯಾಹ್ನ ತೀವ್ರ ಬಿಸಿಲಿರುವಾಗಲೇ ತನ್ನ 5 ವರ್ಷದ ಮೊಮ್ಮಗಳ ಕೈ ಮತ್ತು ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಮನೆಯ ಗೇಟ್ನ ಹೊರಗೆ ಮಲಗಿಸಿದ್ದರು. ಮಗು ಬಿಸಿಲಿನ ತಾಪ ತಾಳಲಾರದೆ ಕಿರುಚಾಡುತ್ತಿದ್ದರೂ ಅಜ್ಜಿ ಕಿಂಚಿತ್ತೂ ಕರುಣೆ ತೋರಿರಲಿಲ್ಲ. ಮಗುವಿನ ಅಳು ಕೇಳಿ ಬಂದ ನೆರೆಹೊರೆಯವರು ತಕ್ಷಣ ಮಗುವನ್ನು ರಕ್ಷಿಸಿ, ಈ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬಾಲಕಿಯ ಪೋಷಕರು ವೃತ್ತಿಯ ನಿಮಿತ್ತ ಪೋರ್ಚುಗಲ್ನಲ್ಲಿ ನೆಲೆಸಿದ್ದಾರೆ. ಅಜ್ಜಿ ಪೊಲೀಸ್ ಅಧಿಕಾರಿಯಾಗಿರುವುದರಿಂದ ಮಗು ಸುರಕ್ಷಿತವಾಗಿರುತ್ತದೆ ಎಂದು ನಂಬಿ ಅವರು ಮಗುವನ್ನು ಭಾರತದಲ್ಲಿ ಬಿಟ್ಟು ಹೋಗಿದ್ದರು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯೇ ಇಂತಹ ವಿಕೃತ ವರ್ತನೆ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಫರೀದ್ಕೋಟ್ ಎಸ್ಎಸ್ಪಿ (SSP) ಪ್ರಜ್ಞಾ ಜೈನ್ ಅವರು ತಕ್ಷಣ ಕ್ರಮ ಕೈಗೊಂಡು ಸರಬ್ಜಿತ್ ಕೌರ್ ಅವರನ್ನು ಅಮಾನತುಗೊಳಿಸಿದ್ದಾರೆ. “ಪೊಲೀಸ್ ಇಲಾಖೆಯಲ್ಲಿ ಅಮಾನವೀಯತೆಗೆ ಸ್ಥಾನವಿಲ್ಲ. ಶಿಸ್ತು ಮತ್ತು ನೈತಿಕತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಡಿಎಸ್ಪಿ ತರ್ಲೋಚನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸದ್ಯ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ (CWC) ಸುಪರ್ದಿಗೆ ಒಪ್ಪಿಸಲಾಗಿದೆ. ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.