ಮಂಗಳೂರು: ಹುಟ್ಟುಹಬ್ಬ ಆಚರಿಸಲು ತಣ್ಣೀರುಬಾವಿ ಬೀಚ್ಗೆ ಬಂದಿದ್ದ ಕೊಡಗು ಮೂಲದ ಯುವಕರನ್ನು ಸ್ಕ್ರೂ ಡ್ರೈವರ್ ತೋರಿಸಿ ಬೆದರಿಸಿ, ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬೈಕ್ ಹಾಗೂ ಸುಲಿಗೆ ಮಾಡಿದ್ದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಸೋಮವಾರಪೇಟೆಯ ಅಜಯ್ ಕೆ. (29) ಎಂಬವರು ಏಪ್ರಿಲ್ 13ರಂದು ತನ್ನ ಸ್ನೇಹಿತರಾದ ರಮೇಶ್ ಮತ್ತು ರಫೀಕ್ ಜೊತೆಗೂಡಿ ತನ್ನ ಹುಟ್ಟುಹಬ್ಬ ಆಚರಿಸಲು ತಣ್ಣೀರುಬಾವಿ ಬೀಚ್ಗೆ ಕಾರಿನಲ್ಲಿ ಬಂದಿದ್ದರು. ಬೆಳಗಿನ ಜಾವ 2:30ರ ಸುಮಾರಿಗೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ಹೋಗಿದ್ದಾಗ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರನ್ನು ವಿಳಾಸ ಕೇಳಲು ಮಾತನಾಡಿಸಿದ್ದರು.
ವಿಳಾಸ ತೋರಿಸುವುದಾಗಿ ನಂಬಿಸಿ ಕಾರು ಹತ್ತಿದ ಯುವಕರು, ಸ್ವಲ್ಪ ದೂರ ಹೋಗುತ್ತಿದ್ದಂತೆ ಸ್ಕ್ರೂ ಡ್ರೈವರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಕಾರಿನ ಮುಂಭಾಗದ ಗ್ಲಾಸನ್ನು ಪುಡಿ ಮಾಡಿ ಅಜಯ್ ಮತ್ತು ಸ್ನೇಹಿತರ ಬಳಿಯಿದ್ದ ಟೈಟಾನ್ ವಾಚ್, ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ವಾಚ್, ಗಿಂಬಲ್, ಪವರ್ ಬ್ಯಾಂಕ್ ಹಾಗೂ ನಗದು ಸೇರಿದಂತೆ ಒಟ್ಟು 32,500 ರೂ. ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದ ತಂಡವು ತನಿಖೆ ಕೈಗೆತ್ತಿಕೊಂಡು, ಏಪ್ರಿಲ್ 13ರಂದೇ ಕಸಬಾ ಬೆಂಗ್ರೆಯ ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ (22) ಎಂಬುವವರನ್ನು ಬಂಧಿಸಿತ್ತು. ಆದರೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಚಂದು ಹಾರೀಸ್ ಪರಾರಿಯಾಗಿದ್ದನು.
ಬುಧವಾರ (ಏಪ್ರಿಲ್ 22) ತಲೆಮರೆಸಿಕೊಂಡಿದ್ದ ಚಂದು ಹಾರೀಸ್ (33) ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಂದ ಸುಲಿಗೆ ಮಾಡಿದ್ದ ಉಳಿದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಟಿವಿಎಸ್ ಅಪಾಚೆ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಚಂದು ಹಾರೀಸ್ ಸಾಮಾನ್ಯ ಅಪರಾಧಿಯಲ್ಲ. ಈತನ ವಿರುದ್ಧ ದಕ್ಷಿಣ ಕನ್ನಡದ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ ಪಟ್ಟಿ (Rowdy Sheet) ತೆರೆಯಲಾಗಿದ್ದು, ನ್ಯಾಯಾಲಯದಿಂದ ಮೂರು ವಾರೆಂಟ್ ಕೂಡ ಜಾರಿಯಾಗಿದ್ದವು. ಸದ್ಯ ಪೊಲೀಸರು ಸುಲಿಗೆ ಮಾಡಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.