ಮುಂಬೈ ನವೆಂಬರ್ 25: ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಹಠಾತ್ತನೆ ಮುಂದೂಡಿಕೆ ಆಗಿರುವ ಕುರಿತು ಇದೀಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಲಾಶ್ ಮುಚ್ಚಲ್ ಕುರಿತಂತೆ ಹಲವು ಪೋಸ್ಟ್ ಗಳು ಹರಿದಾಡುತ್ತಿದ್ದು, ಸತ್ಯಾಸತ್ಯತೆ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.


ಭಾರೀ ವಿಜೃಂಭಣೆಯಿಂದ ಬಾಲ್ಯದ ಗೆಳೆಯ ಪಲಾಶ್ ಮುಚ್ಛಲ್‌ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದೆ.
ಸ್ಮೃತಿ ಮಂದಾನಾ ಮತ್ತು ಪಲಾಶ್ ಮುಚ್ಛಲ್ ಜತೆಗಿನ ವಿವಾಹ ಸಮಾರಂಭವು ಭಾನುವಾರ (ನವೆಂಬರ್ 23) ನಡೆಯಬೇಕಿತ್ತು. ಸ್ಮೃತಿ ಅವರ ತಂದೆಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದರಿಂದ ವಿವಾಹವನ್ನು ಮುಂದೂಡಲಾಗಿತ್ತು. ತಂದೆಯೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿದ್ದ ಸ್ಮೃತಿ ಅವರು ಅವರ ಚೇತರಿಕೆಯವರೆಗೂ ಮದುವೆಯಾಗದಿರಲು ನಿರ್ಧರಿಸಿದ್ದಾರೆ ಎಂದು ಮಂದಾನ ಅವರ ಮ್ಯಾನೇಜರ್‌ ತುಹೀನ್‌ ಮಿಶ್ರಾ ಹೇಳಿದ್ದರು.


ಆದರೆ ಇದೀಗ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನೂ ಸ್ಮೃತಿ ಅಳಿಸಿ ಹಾಕಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಸ್ಮೃತಿ ಅವರ ಸ್ನೇಹಿತೆ ಜಮಿಮಾ ರೋಡ್ರಿಗಸ್‌ ಅವರೂ ತಮ್ಮ ಖಾತೆಗಳಿಂದ ಸ್ಮೃತಿ ಮದುವೆಗೆ ಸಂಬಂಧಿಸಿದ ಪೋಸ್ಟ್‌, ವಿಡಿಯೊಗಳನ್ನು ತೆಗೆದಿದ್ದಾರೆ.

ವಿವಾಹ ರದ್ದಾದ ಬೆನ್ನಲ್ಲೇ ಇಬ್ಬರ ನಡುವಿನ ಬಿರುಕುಗಳೇ ಕಾರಣ ಎಂಬ ಮಾತುಗಳೂ ಕೇಳಿಬಂದಿವೆ. ಮದುವೆ ಮುಂದೂಡಿದ ನಂತರ ಪಲಾಶ್ ಅವರು ನಾಪತ್ತೆಯಾಗಿರುವುದು ಹಾಗೂ ಪಲಾಶ್‌ ಅವರು ಬೇರೊಬ್ಬ ಯುವತಿಯೊಂದಿಗೆ ನಡೆಸಿದ್ದಾರೆ ಎನ್ನಲಾದ ವಾಟ್ಸ್‌ಆ್ಯಪ್‌ ಚಾಟ್‌ ಎಲ್ಲೆಡೆ ಹರಿದಾಡುತ್ತಿದೆ.
ಇದರ ನಡುವೆ ಸ್ಮೃತಿ ಮತ್ತು ಪಲಾಶ್ ಮದುವೆ ನಿಜವಾಗಿಯೂ ಮುರಿದು ಬಿತ್ತೇ ಎಂಬುದಕ್ಕೆ ಎರಡೂ ಕುಟುಂಬಗಳೇ ಸ್ಪಷ್ಟನೆ ನೀಡಬೇಕಿದೆ.

Share Information