ಮಂಗಳೂರು, ಮಾರ್ಚ್ 17: ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕಲಡ್ಕ ಯುವಕ ಮಂಡಲ (ರಿ) ಬಜಾಲ್ ಹಾಗೂ ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಸಹಯೋಗದಲ್ಲಿ ಮಾರ್ಚ್ 16ರಂದು ಪಕ್ಕಲಡ್ಕದ ಭಗತ್ ಸಿಂಗ್ ಭವನದಲ್ಲಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಧ ಧಾರ್ಮಿಕ ಕೇಂದ್ರಗಳ ಮುಖಂಡರು, ಮತ್ತು ಹಲವು ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.

ಪಕ್ಕಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಹನೀಫ್ ಧಾರಿಮಿ ಮಾತನಾಡಿ, “ಪಕ್ಕಲಡ್ಕ ಯುವಕ ಮಂಡಲ ಹಾಗೂ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಸೌಹಾರ್ದ ಸೇತುವೆ ಕಟ್ಟುವ ಕಾರ್ಯಗಳಲ್ಲಿ ಮಾದರಿಯಾಗಿದ್ದು, ಇಂತಹ ಕಾರ್ಯಕ್ರಮಗಳು ಸಮುದಾಯದಲ್ಲಿ ಶಾಂತಿ ಬೆಳೆಸಲು ನೆರವಾಗುತ್ತವೆ” ಎಂದು ಹೇಳಿದ್ದಾರೆ. ವೇದಿಕೆಯಲ್ಲಿ ಕಾವು ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಆಳ್ವ ಅವರು, “ಸ್ಥಳೀಯವಾಗಿ ಎಲ್ಲಾ ಧಾರ್ಮಿಕ ಕೇಂದ್ರಗಳು ಪರಸ್ಪರ ಸಹಬಾಳ್ವೆಯಿಂದ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಅವಕಾಶ ನೀಡುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ” ಎಂದರು.
ಹೋಲಿ ಸ್ಪಿರೀಟ್ ಚರ್ಚ್ ಉಪಾಧ್ಯಕ್ಷ ದೀಪಕ್ ಡಿಸೋಜ ತಮ್ಮ ಭಾಷಣದಲ್ಲಿ, “ನಮ್ಮೂರಿನ ಎಲ್ಲಾ ಧಾರ್ಮಿಕ ಕೇಂದ್ರದ ಮುಖ್ಯಸ್ಥರುಗಳು ಸೌಹಾರ್ದತೆಯ ವಿಷಯದಲ್ಲಿ ಸೇರಿಕೊಂಡು ಪರಸ್ಪರ ಮಾನವೀಯ ಸಂಬಂಧಗಳನ್ನು ಬೆಳೆಸಿದರೆ, ದ್ವೇಷ ಬೀರುವ ಸಂದರ್ಭಗಳಿಗೆ ಜಾಗ ಬಿಟ್ಟಿರುತ್ತದೆ” ಎಂದರು. ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಸಾಲ್ಯಾನ್, ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಖತೀಬರಾದ ಹಸನ್ ಫೈಝೀ, ಇಬ್ರಾಹಿಂ ಮುಸ್ಲಿಯಾರ್, ಕಾರ್ಮಿಕ ಸಂಘಟನೆಯ ಮುಖಂಡ ಕೆ. ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಶಾಫೀ ಆಟೋ ಚಾಲಕರ ಸಂಘದ ಅಧ್ಯಕ್ಷ ಬಶೀರ್, ಎನ್.ಎಫ್.ಸಿ. ಕ್ರಿಕೇಟರ್ಸ್ ಮುಖಂಡ ನವಾಝ್, ಜಾತ್ಯಾತೀತ ಪಕ್ಷದ ಮುಖಂಡ ಹನೀಫ್ ಬಜಾಲ್, ಯುವ ಉದ್ಯಮಿ ಅನ್ವರ್ ಬಜಾಲ್, ಮದರ್ ತೆರೆಜಾ ವಿಚಾರ ವೇದಿಕೆಯ ಡೋಲ್ಫಿ ಡಿಸೋಜ ಎನೆಲ್ಮಾರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡ ನವೀನ್ ಕೊಂಚಾಡಿ, ಹೋಲಿ ಸ್ಪಿರೀಟ್ ಚರ್ಚ್ ಕಾರ್ಯದರ್ಶಿ ಲೀಡಿಯಾ ಲೋಬೋ ಮತ್ತು ತಯ್ಯೂಬ್ ಬೆಂಗರೆ ಶುಭಕೋರಿ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.