ಶ್ರೀನಗರ, ಮಾರ್ಚ್ 15: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಭಾರತಕ್ಕೆ ಒಳನುಸುಳಲು ಯತ್ನಿಸಿದ ಪಾಕಿಸ್ತಾನ ಮೂಲದ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಒಳನುಸುಳುವಿಕೆಯನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ. ಮಾರ್ಚ್ 14 ಹಾಗೂ 15ರ ಮಧ್ಯರಾತ್ರಿ ಒಳನುಸುಳುವ ಯತ್ನ ನಡೆಯಬಹುದು ಎಂಬ ನಿಖರ ಮಾಹಿತಿ ಜಮ್ಮು–ಕಾಶ್ಮೀರ ಪೊಲೀಸರಿಂದ ದೊರೆತ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ಶೋಧ ಮತ್ತು ತಡೆ ಕಾರ್ಯಾಚರಣೆ ಆರಂಭಿಸಿವೆ.

ಸೈನಿಕರು ಅರಣ್ಯ ಪ್ರದೇಶದಲ್ಲಿ ಪಹರೆ ನಡೆಸುತ್ತಿದ್ದ ವೇಳೆ ಪೊದೆಯಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದಿತು. ಶಂಕಿತ ವ್ಯಕ್ತಿಯನ್ನು ಸೆರೆಹಿಡಿಯಲು ಯತ್ನಿಸಿದಾಗ ಆತ ಸೈನಿಕರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಇದರಿಂದ ಕೆಲಕಾಲ ಗುಂಡಿನ ಚಕಮಕಿ ನಡೆದಿದ್ದು, ಪ್ರತಿದಾಳಿಯಲ್ಲಿ ಒಬ್ಬ ಉಗ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ಉಗ್ರನ ಬಳಿಯಿಂದ ಎಕೆ ಸರಣಿ ರೈಫಲ್, ಪಿಸ್ತೂಲ್ ಹಾಗೂ ಹೆಚ್ಚಿನ ಪ್ರಮಾಣದ ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಶ್ರೀನಗರ ಮೂಲದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಗಡಿಯಲ್ಲಿನ ಒಳನುಸುಳುವಿಕೆಯನ್ನು ಸಮಯಕ್ಕೆ ಸರಿಯಾಗಿ ತಡೆದಿರುವುದಾಗಿ ತಿಳಿಸಿದೆ.
ಘಟನೆಯ ಬಳಿಕ ಪ್ರದೇಶದಲ್ಲಿ ಇನ್ನೂ ಯಾರಾದರೂ ಉಗ್ರರು ಅಡಗಿರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿವೆ. ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಗಡಿಭಾಗದಲ್ಲಿ ಉಗ್ರರ ಒಳನುಸುಳುವ ಪ್ರಯತ್ನಗಳು ಹೆಚ್ಚುತ್ತಿರುವ ಹಿನ್ನೆಲೆ, ಭಾರತೀಯ ಸೇನೆ ಗಡಿಯಲ್ಲಿನ ಭದ್ರತೆಯನ್ನು ಮತ್ತಷ್ಟು ಕಟ್ಟು ನಿಟ್ಟಾಗಿಸಿದೆ.