Connect with us

LATEST NEWS

ಪಡುಬಿದ್ರಿ ಟಗ್ ತೆರವು ಕಾರ್ಯಾಚರಣೆ : ಓರ್ವ ಸಿಬ್ಬಂದಿ ಮೃತ ದೇಹ ಪತ್ತೆ

ಪಡುಬಿದ್ರಿ, ಮೇ 25 : ಪಡುಬಿದ್ರಿಯ ಕಾಡಿಪಟ್ಣ ಬಳಿ ಕಡಲ ತೀರದಲ್ಲಿ ಮಗುಚಿಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಅಲಯನ್ಸ್ ಟಗ್ ಮೇಲಕ್ಕೆತ್ತುವ ಕಾರ್ಯಾಚರಣೆ ಕೊನೆಗೂ ಸಫಲವಾಗಿದೆ. ಟಗ್ಗಿನ ಒಳಭಾಗದಲ್ಲಿ ನಾಪತ್ತೆಯಾದ ಮೂವರು ಸಿಬ್ಬಂದಿ ದೇಹಗಳ ಶೋಧನೆ ಕಾರ್ಯಾಚರಣೆ ನಡೆಯುತ್ತಿದೆ.

ಮೇ 15 ರಂದು ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯಲ್ಲಿ ಪತ್ತೆಯಾದ ಟಗ್ ತೆರವು ಕಾರ್ಯಾಚರಣೆ ಕಳೆದ 5 ದಿನಗಳಿಂದ ನಡೆಯುತ್ತಿದ್ದು, ಯಂತ್ರಗಳ ಕೊರತೆ ಹಾಗೂ ತಾಂತ್ರಿಕ ದೋಷಗಳಿಂದ ಕಾರ್ಯಾಚರಣೆ ವಿಫಲವಾಗಿತ್ತು.

ಕಳೆದ ಭಾನುವಾರ ಪಡುಬಿದ್ರಿ ಕಾಡಿಪಟ್ಣದ ವಿಷ್ಣು ಭಜನಾ ಮಂಡಳಿಯಲ್ಲಿ ಶಾಸಕ ಲಾಲಾಜಿ ಆರ್. ಮೆಂಡನೆ, ಮಾಜಿ ಜಿಪಂ ಶಶಿಕಾಂತ್ ಪಡುಬಿದ್ರಿ, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್, ಬಿಲಾಲ್ ನೇತೃತ್ವದ ಬದ್ರಿಯಾ ಹಾಗೂ ಯೋಜಕ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರಿದ್ದ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಜಂಟಿ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು.

ಸೋಮವಾರ ಬೆಳಗ್ಗೆಯಿಂದಲೇ ಹೆಚ್ಚುವರಿ ಯಂತ್ರಗಳ ಸಹಾಯದಿಂದ ತೆರವು ಕಾರ್ಯಾಚರಣೆ ಎಲ್ಲ ಸಿದ್ದತೆಗಳನ್ನು ನಡೆಸಲಾಗಿದ್ದು, ಮಂಗಳವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿ ಮಗುಚಿ ಬಿದ್ದ ಟಗ್ ಸರಿ ನಿಲ್ಲಿಸುವಲ್ಲಿ ಯಶಸ್ಸು ಕಂಡಿದೆ.

ಪಡುಬಿದ್ರೆ ಕಡಲತೀರ ಸೇರಿದ ಟಗ್‌ ಮಗುಚಿ ಹಾಕಿ ಮೃತದೇಹಗಳಿಗೆ ಶೋಧನೆ ನಡೆಸಿದ್ದು, ಟಗ್ ಕ್ಯಾಬಿನ್ ಒಳಗೆ ಒಂದು ಮೃತದೇಹ ಪತ್ತೆಯಾಗಿದೆ. ರತ್ನಗಿರಿ ನಿವಾಸಿ ಅಶ್ಪಕ್ ಆಲಿ ಮೃತದೇಹ ಪತ್ತೆಯಾಗಿದ್ದು, ಬಂಡೆಗೆ ಜಜ್ಜಿ ನಜ್ಜುಗುಜ್ಜಾಗಿರುವ ಟಗ್​ ಎರಡು ಮೃತದೇಹ ಕ್ಯಾಬಿನ್ ಒಳಗೆ ಸಿಲುಕಿರುವ ಸಾಧ್ಯತೆಯಿದೆ. ಪಡುಬಿದ್ರೆ – ಕಾಪು ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.