ಮುಂಬೈ/ಅಮರಾವತಿ, ಏಪ್ರಿಲ್ 15: ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿಯರನ್ನು ವಂಚಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಘೋರ ಪ್ರಕರಣವೊಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಬಯಲಿಗೆ ಬಂದಿದೆ. ಸುಮಾರು 180ಕ್ಕೂ ಹೆಚ್ಚು ಬಾಲಕಿಯರನ್ನು ಬಲಿಪಶು ಮಾಡಿ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಆರೋಪಿ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ನನ್ನು ಪೊಲೀಸರು ಬಂಧಿಸಿದ್ದಾರೆ.

ಪರತ್ವಾಡ ನಗರದ ನಿವಾಸಿಯಾದ ಅಯಾಜ್, ವಾಟ್ಸಾಪ್ ಮತ್ತು ಸ್ನ್ಯಾಪ್ಚಾಟ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಅಪ್ರಾಪ್ತ ಬಾಲಕಿಯರನ್ನು ಸಂಪರ್ಕಿಸುತ್ತಿದ್ದ. ಪ್ರೀತಿಯ ಬಲೆಗೆ ಬೀಳಿಸಿ ಅವರನ್ನು ಮುಂಬೈ ಮತ್ತು ಪುಣೆಯಂತಹ ನಗರಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಚಿತ್ರೀಕರಿಸಿದ ವಿಡಿಯೋಗಳನ್ನು ಇಟ್ಟುಕೊಂಡು ಬಾಲಕಿಯರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಈತ, ಅವರನ್ನು ವೇಶ್ಯಾವಾಟಿಕೆಗೂ ತಳ್ಳುತ್ತಿದ್ದ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಿಜೆಪಿ ಸಂಸದ ಅನಿಲ್ ಬೋಂಡೆ ಅವರು ಈ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಆನಂದ್ ಅವರಿಗೆ ದೂರು ಸಲ್ಲಿಸಿದ ನಂತರ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದೆ. “ಇದು ಕೇವಲ ಒಬ್ಬ ವ್ಯಕ್ತಿಯ ಕೃತ್ಯವಲ್ಲ, ಇದರ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆಯಿದೆ. ತಕ್ಷಣವೇ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ನಡೆಸಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಹಲವು ಆಕ್ಷೇಪಾರ್ಹ ವಿಡಿಯೋಗಳು ಪತ್ತೆಯಾಗಿವೆ.