ಮಂಗಳೂರು

ದಕ್ಷಿಣಕನ್ನಡ ಜಿಲ್ಲಾಧಿಕಾರಿ ವರ್ಗಕ್ಕೆ ಅಧಿಕಾರಿಗಳ ಷಡ್ಯಂತ್ರ ?

, ಮೇ 20: ಕೊರೊನಾ ವಿಪತ್ತು ನಿರ್ವಹಣೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ವಿರುದ್ಧ ವಿಫಲರಾಗಿದ್ದಾರೆ ಎನ್ನುವ ಆರೋಪ ಹೆಣೆಯುವ ಷಡ್ಯಂತ್ರ ನಡೆಯುತ್ತಿದೆ.

ಸ್ವತ ಅಧಿಕಾರಿಗಳಿಂದಲೇ ಈ ರೀತಿಯ ವ್ಯವಸ್ಥಿತ ಸಂಚು ನಡೆಯುತ್ತಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ.

ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ರಾಜೀನಾಮೆಯ ಬಳಿಕ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಸಿಂಧೂ ರೂಪೇಶ್ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಅಧಿಕಾರ ಸ್ವೀಕರಿಸಿದ ಬಳಿಕ ಕೊರೊನಾ ಮಹಾಮಾರಿಯಂತ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅನಿವಾರ್ಯ ಪರಿಸ್ಥಿಯನ್ನು ಅವರು ಎದುರಿಸಬೇಕಾಯಿತು.

ಆಡಳಿತಾತ್ಮಕವಾಗಿ ತಾನು ತೆಗೆದುಕೊಂಡಿದ್ದ ಕೆಲವು ಕಠಿಣ ನಿಯಮಗಳನ್ನು ಅರಗಿಸಿಕೊಳ್ಳಲಾಗದ ಕೆಲವು ಅಧಿಕಾರಿಗಳು ಇದೀಗ ಜಿಲ್ಲಾಧಿಕಾರಿಯವರ ಮೇಲೆ ತಿರುಗಿಬಿದ್ದಿದ್ದಾರೆ ಎನ್ನುವ ಆರೋಪವಿದೆ.

ಕೊರೊನಾ ತಡೆ ಹಾಗೂ ನಿರ್ವಹಣೆಯ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಉದ್ಧೇಶಪೂರ್ವಕವಾಗಿ ಜಾರಿಗೆ ತರದಿರುವುದು, ಆದೇಶಗಳ ಜಾರಿಯಲ್ಲಿ ಲೋಪದೋಷಗಳಿಂದಾಗಿ ಜಿಲ್ಲಾಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ತಿರುಗಿ ಬೀಳುವಂತೆಯೂ ಈ ಅಧಿಕಾರಿಗಳು ವ್ಯವಸ್ಥಿತವಾದ ಸಂಚನ್ನು ಮಾಡಿದ್ದಾರೆ.

ಈ ಕಾರಣಕ್ಕಾಗಿಯೇ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ವಿರುದ್ಧ ಕೆಲವು ಜನಪ್ರತಿನಿಧಿಗಳು ಅಸಮಾಧಾನವನ್ನೂ ಹೊರ ಹಾಕುತ್ತಿದ್ದು, ವರ್ಗಾವಣೆಗೂ ಪ್ರಯತ್ನ ಆರಂಭಿಸಿದ್ದಾರೆ ಎನ್ನುವ ದೂರುಗಳಿವೆ.

ಅಲ್ಲದೆ ಜಿಲ್ಲೆಯ ಹೆಚ್ಚು ಕೊರೊನಾ ಪ್ರಕರಣಗಳ ಹಿಂದೆ ಥಳಕು ಹಾಕಿಕೊಂಡಿರುವ ಮಂಗಳೂರಿನ ಪಡೀಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಮೂಲ ಹುಡುಕುವ ವಿಚಾರದಲ್ಲೂ ಜಿಲ್ಲಾಧಿಕಾರಿಗಳ ಸಹೋದ್ಯೋಗಿಗಳೇ ಅವರ ದಾರಿ ತಪ್ಪಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಖಾಸಗಿ ಆಸ್ಪತ್ರೆಯ ಕೊರೊನಾ ಮೂಲದ ಕುರಿತು ಕಿರಿಯ ಅಧಿಕಾರಿಗಳು ತಯಾರಿಸಿದ ವರದಿಯನ್ನೂ ಈ ಸಹೋದ್ಯೋಗಿಗಳೇ ಕಸದ ಬುಟ್ಟಿ ಸೇರುವಂತೆ ಮಾಡಿದ್ದಾರೆ ಎನ್ನುವ ಆರೋಪಗಳೂ ಇವೆ.

ಜಿಲ್ಲಾಧಿಕಾರಿ ಕಛೇರಿಯಲ್ಲಿರುವ ಈ ಸಹೋದ್ಯೋಗಿಗಳಿಗೆ ಕೆಲವು ಹೊರಗಡೆಯ ಲಾಭಿಗಳೂ ಸಾಥ್ ನೀಡುತ್ತಿವೆ ಎನ್ನುವ ಗುಮಾನಿಯೂ ಹಬ್ಬಲಾರಂಭಿಸಿದೆ.