ಮಂಗಳೂರು ಡಿಸೆಂಬರ್ 30: ಸಕಲೇಶಪುರ ಘಾಟ್ ಸೆಕ್ಷನ್ ನಲ್ಲಿ ವಿದ್ಯುಧೀಕರಣ ಪೂರ್ಣಗೊಂಡ ಬೆನ್ನಲ್ಲೇ ಇದೀಗ ಮಂಗಳೂರು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಆಗ್ರಹ ಕೇಳಿಬಂದಿದೆ.


ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರು ಬೆಂಗಳೂರು ನಡುವೆ ಪ್ರತಿದಿನ 3 ವಂದೇ ಭಾರತ್ ರೈಲು ಸೇವೆ ನೀಡುವಂತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವೀನ್ ವೈಷ್ಣವ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮಂಗಳೂರು ಮತ್ತು ಬೆಂಗಳೂರು ಕರ್ನಾಟಕದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳು. ಮಂಗಳೂರನ್ನು ಬೆಂಗಳೂರಿಗೆ ಪರ್ಯಾಯವಾದ ಅತ್ಯಾಧುನಿಕ ಉದ್ಯೋಗ ಮತ್ತು ಕೈಗಾರಿಕಾ ತಾಣವನ್ನಾಗಿ ರೂಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಆದರೆ, ಈ ಎರಡು ನಗರಗಳ ನಡುವಿನ ವೇಗದ ಸಾರಿಗೆ ಸಂಪರ್ಕದ ಕೊರತೆಯು ಈ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿದೆ.


ಪ್ರಸ್ತುತ ಸಾವಿರಾರು ಉದ್ಯಮಿಗಳು ಮತ್ತು ವೃತ್ತಿಪರರು ಕೇವಲ ಕೆಲವೇ ಗಂಟೆಗಳ ಕೆಲಸಕ್ಕಾಗಿ ರಾತ್ರಿ ಪೂರ್ತಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಇದು ನಮ್ಮ ಶ್ರಮಜೀವಿ ಜನರಿಗೆ ಆಗುತ್ತಿರುವ ಅನ್ಯಾಯ.
ಈ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಜನಸಾಮಾನ್ಯರ ಅನುಕೂಲಕ್ಕಾಗಿ ಈ ಕೆಳಗಿನಂತೆ ವಂದೇ ಭಾರತ್ (Vande Bharat) ರೈಲುಗಳನ್ನು ಆರಂಭಿಸಲು ಕೋರಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ (Shri Ashwini Vaishnaw) ಅವರಿಗೆ ಪತ್ರ ಬರೆದು ಅದರಂತೆ,
* ಬೆಳಗ್ಗೆ 4:00 ಗಂಟೆಗೆ
* ಬೆಳಗ್ಗೆ 10:00 ಗಂಟೆಗೆ
* ಸಂಜೆ 6:00 ಗಂಟೆಗೆ
ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿದಿನ 03 ವಂದೇ ಭಾರತ್ (Vande Bharat) ರೈಲುಗಳ ಸೇವೆ ಒದಗಿಸುವಂತೆ ಉಲ್ಲೇಖಿಸಿದ್ದೇನೆ.
ಈ ರೈಲು ಸಂಪರ್ಕವು ಕೇವಲ ಪ್ರಯಾಣವನ್ನಷ್ಟೇ ಅಲ್ಲದೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೂ ದೊಡ್ಡ ಚೈತನ್ಯ ನೀಡಲಿದೆ. ಕರಾವಳಿ ಜನರ ಈ ನ್ಯಾಯಯುತ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸ ಇರಿಸಿದ್ದೇನೆ ಎಂದಿದ್ದಾರೆ.

Share Information