ಬೆಂಗಳೂರು, ಏಪ್ರಿಲ್ 11 : ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಆಧಾರವಿಲ್ಲದ ‘ಝಾಂಬಿ ಡ್ರಗ್ಸ್’ ಕುರಿತ ವಿಡಿಯೋ ಹಂಚಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಆರೋಪದ ಮೇಲೆ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ಕುರಿತು ಬಾಗಲೂರು ಪೊಲೀಸರು ನಟನಿಗೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇತ್ತೀಚೆಗೆ ಹೇಮಂತ್ ಕುಮಾರ್ ಎಂಬ ಯುವಕ, ಬೆಂಗಳೂರಿನ ಬಾಗಲೂರು ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಕಂಡು, ‘ಬೆಂಗಳೂರಿಗೆ ಝಾಂಬಿ ಡ್ರಗ್ಸ್ ಕಾಲಿಟ್ಟಿದೆ’ ಎಂಬ ಅರ್ಥದಲ್ಲಿ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸದ ನಟ ದುನಿಯಾ ವಿಜಯ್, ತಮ್ಮ ಸೋಶಿಯಲ್ ಮೀಡಿಯಾ ಪುಟದಲ್ಲಿ ಇದನ್ನು ಶೇರ್ ಮಾಡಿದ್ದರು. ಅಷ್ಟೇ ಅಲ್ಲದೆ, ಪೊಲೀಸರ ಕಾರ್ಯವೈಖರಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು, ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ವೈದ್ಯಕೀಯ ವರದಿಯಲ್ಲಿ ಆತನ ರಕ್ತದಲ್ಲಿ ಯಾವುದೇ ಮಾದಕ ದ್ರವ್ಯದ ಅಂಶ ಪತ್ತೆಯಾಗಿಲ್ಲ. ಅಸಲಿಗೆ ಆ ವ್ಯಕ್ತಿ ಸಂಧಿವಾತ (Arthritis) ಮತ್ತು ಸೈನುಟಿಸ್ ಸಮಸ್ಯೆಗೆ ಮಾತ್ರೆಗಳನ್ನು ಸೇವಿಸುತ್ತಿದ್ದು, ಅದರ ಜೊತೆಗೆ ಮದ್ಯಪಾನ ಮಾಡಿದ್ದರಿಂದ ದೇಹದ ಸಮತೋಲನ ತಪ್ಪಿ ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂಬುದು ಖಚಿತವಾಗಿದೆ.
ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಮೂಲ ವಿಡಿಯೋ ಚಿತ್ರೀಕರಿಸಿದ್ದ ಹೇಮಂತ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ತಪ್ಪೊಪ್ಪಿಕೊಂಡು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾನೆ. ವಿಡಿಯೋ ಹಂಚಿಕೊಂಡಿದ್ದ ನಟ ದುನಿಯಾ ವಿಜಯ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಂದಿಗೆ ಪೊಲೀಸರು ಈಗ ನೋಟಿಸ್ ನೀಡಿದ್ದಾರೆ. ನಟ ದುನಿಯಾ ವಿಜಯ್ ಸದ್ಯ ಹೊರರಾಜ್ಯದಲ್ಲಿದ್ದು, ಪೊಲೀಸರು ವಾಟ್ಸಪ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, ಕೂಡಲೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕ ವ್ಯಕ್ತಿಗಳು ಇಂತಹ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.