Connect with us

LATEST NEWS

ಕಾಲೇಜು ಆರಂಭವಾದರೂ ಖಾಲಿ ಹೊಡೆದ ಕ್ಲಾಸ್ ರೂಂಗಳು

ಮಂಗಳೂರು ನವೆಂಬರ್ 17: ಕೊರೊನಾ ಲಾಕ್ ಡೌನ್ ನಂತರ ಇಂದು ಮೊದಲ ಬಾರಿಗೆ ಅಂತಿಮ ವರ್ಷದ ಪದವಿ ವಿಧ್ಯಾರ್ಥಿಗಳು ಕಾಲೇಜಿನತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಕೊರೊನಾ ಪರೀಕ್ಷೆ ಕಡ್ಡಾಯ ಹಿನ್ನಲೆ ವಿಧ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇತ್ತು.


ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಇಂದು ಅಂತಿಮ ವರ್ಷದ ಪದವಿ ವಿಧ್ಯಾರ್ಥಿಗಳಿಗೆ ಕಾಲೇಜು ಆರಂಭಿಸಲಾಗಿದೆ. ಆದರೆ ಕಾಲೇಜು ಪ್ರವೇಶಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಕೆಲವೇ ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದರು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಮಾತ್ರ ಬಂದಿದ್ದಾರೆ. ಕೋವಿಡ್ ಪರೀಕ್ಷಾ ವರದಿ ಹಾಗೂ ಪೋಷಕರಿಂದ ಒಪ್ಪಿಗೆ ಪತ್ರ ತಂದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿನೊಳಗೆ ಪ್ರವೇಶ ನೀಡಲಾಗುತ್ತಿದೆ.


ಕೋವಿಡ್‌‌ ಟೆಸ್ಟ್‌ ಮಾಡಿಸಿದ್ದರೂ, ಪ್ರಮಾಣ ಪತ್ರ ಸಿಗದ ಹಿನ್ನೆಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿಲ್ಲ. ಮೊದಲ ದಿನ ಶೇ.20-25ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಕೆಲವೊಂದು ಖಾಸಗಿ ಹಾಗೂ ಸ್ವಾಯತ್ತ ಕಾಲೇಜುಗಳು ಮಂಗಳವಾರ ಆರಂಭವಾಗಿಲ್ಲ. ವಿದ್ಯಾರ್ಥಿಗಳಿಗೆ ಮೊದಲೇ ಸೂಚನೆ ನೀಡಿದ್ದರಿಂದ ಅಂತಹ ಕಾಲೇಜುಗಳ ಆವರಣ ಎಂದಿನಂತೆ ಬಿಕೋ ಅನ್ನುತಿತ್ತು.