Connect with us

    LATEST NEWS

    ಸೋಂಕಿನ ಭೀತಿ ; ಪಾಸಿಟಿವ್ ಆದರೂ ಪೊಲೀಸರಿಗೆ ಕ್ವಾರಂಟೈನ್ ಯಾಕಿಲ್ಲ..?! ನಾವು ಮನುಷ್ಯರಲ್ಲವೇ..??

    ಮಂಗಳೂರು, ಜೂನ್ 25 : ಬೆಂಗಳೂರಿನ ಬಳಿಕ ಈಗ ಮಂಗಳೂರಿನಲ್ಲೂ ಕೊರೊನಾ ವಾರಿಯರ್ಸ್ ಗಳಲ್ಲಿ ಭೀತಿ ಶುರುವಾಗಿದೆ. ಕೇರಳ ಗಡಿಭಾಗದ ತಲಪಾಡಿಯಲ್ಲಿ ನಿಯೋಜನೆ ಆಗಿದ್ದ ಪೊಲೀಸ್ ಉಪ ನಿರೀಕ್ಷಕರೊಬ್ಬರಿಗೆ ಪಾಸಿಟಿವ್ ಆದ ಬಳಿಕ ಇಂದು ಮತ್ತೆ ಮೂರು ಮಂದಿ ಪೇದೆಗಳಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗ್ತಿದೆ. ಇದರಿಂದಾಗಿ ಉಳ್ಳಾಲ ಭಾಗದ ಪೊಲೀಸರಲ್ಲಿ ಕೊರೊನಾ ಭೀತಿ ಆವರಿಸಿದೆ.

    ಉಳ್ಳಾಲದ ಉಪ ವಿಭಾಗದಲ್ಲಿ ಆರು ಮಂದಿ ಉಪ ನಿರೀಕ್ಷಕರಿದ್ದಾರೆ. ಸುಮಾರು 70 ಮಂದಿ ಪೇದೆಗಳು ಕಾರ್ಯ ನಿರ್ವಹಿಸ್ತಿದ್ದಾರೆ. ಕೊರೊನಾ ಲಾಕ್ ಡೌನ್ ಕಾಲದಲ್ಲಿ ಇವರನ್ನು ಸರದಿಯ ಪ್ರಕಾರ ನಿಯೋಜನೆ ಮಾಡಲಾಗ್ತಿತ್ತು. ತಲಪಾಡಿ ಸೇರಿದಂತೆ ವಿವಿಧೆಡೆ ಗಡಿಭಾಗದಲ್ಲಿ ಇವರನ್ನು ಒಬ್ಬರು ಮೇಲಧಿಕಾರಿ ಜೊತೆಗೆ ಡಿಸಿಪಿ ಪ್ರತಿದಿನ ನಿಯೋಜನೆ ಮಾಡುತ್ತಾರೆ. ಆದರೆ, ಈ ಪೈಕಿ ಉಳ್ಳಾಲ ಠಾಣೆಯಲ್ಲಿ ಎಸ್ ಐ ಆಗಿದ್ದ ಅಧಿಕಾರಿಯೊಬ್ಬರಿಗೆ ಎರಡು ದಿನಗಳ ಹಿಂದೆ ಪಾಸಿಟಿವ್ ಕಂಡುಬಂದಿತ್ತು. ಸಾಮಾನ್ಯವಾಗಿ ಒಂದು ಠಾಣೆಯಲ್ಲಿ ಯಾರಿಗಾದ್ರೂ ಪಾಸಿಟಿವ್ ಆದರೆ ಠಾಣೆಯನ್ನು ಸೀಲ್ ಡೌನ್ ಮಾಡಬೇಕು. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಬೇಕು. ಉಳ್ಳಾಲದಲ್ಲಿ ಎಸ್ಐ ಸೇರಿ ಮೂವರಿಗೆ ಪಾಸಿಟಿವ್ ಆದರೂ ಇನ್ನೂ ಕ್ವಾರಂಟೈನೂ ಆಗಿಲ್ಲ. ಠಾಣೆ ಸೀಲ್ ಡೌನ್ ಕೂಡ ಆಗಿಲ್ಲ. ಹೀಗಾಗಿ ಅಲ್ಲಿನ ಪೊಲೀಸರಿಗೆ ಭಯ ಶುರುವಾಗಿದ್ದು ಮನೆಗೆ ತೆರಳಲು ಭಯ ಪಡುತ್ತಿದ್ದಾರೆ.

    “ನಮಗೆ ಮನೆಗೆ ತೆರಳಲು ಭಯವಾಗುತ್ತಿದೆ. ಒಂದ್ವೇಳೆ ಪಾಸಿಟಿವ್ ಇದ್ದರೆ ಮನೆಯವರಿಗೂ ಹರಡುವ ಸಾಧ್ಯತೆಯಿದೆ. ಪತ್ನಿ, ಮಕ್ಕಳಿಗೆ ವಿನಾಕಾರಣ ರೋಗ ಅಂಟುವ ಭಯ ಕಾಡ್ತಿದೆ‌. ನಮ್ಮನ್ನು ಎಲ್ಲಾದ್ರೂ ಒಂದು ಹಾಲ್ ನಲ್ಲಿ ಹಾಕಿದ್ರೂ ಪರ್ವಾಗಿಲ್ಲ. ಪ್ರತ್ಯೇಕ ಇರಲು ವ್ಯವಸ್ಥೆ ಮಾಡಬೇಕಿತ್ತು. ಹಿರಿಯ ಅಧಿಕಾರಿಗಳು ನಮ್ಮ ಅಹವಾಲು ಕೇಳುವುದಕ್ಕೂ ಬಂದಿಲ್ಲ. ನಾವೂ ಮನುಷ್ಯರಲ್ಲವೇ..” ಎಂದು ಪೊಲೀಸ್ ಸಿಬಂದಿ ಒಬ್ಬರು ಅಲವತ್ತುಕೊಂಡಿದ್ದಾರೆ.

    “ನಮ್ಮನ್ನೆಲ್ಲ ಟೆಸ್ಟ್ ಮಾಡಿಸಬೇಕಿತ್ತು. ಆದರೆ ಹಿರಿಯ ಅಧಿಕಾರಿಗಳು ಟೆಸ್ಟ್ ಮಾಡಿಸಿಕೊಳ್ಳುವುದಕ್ಕೂ ಅವಕಾಶ ಕೊಡುತ್ತಿಲ್ಲ. ಇವತ್ತು ಹತ್ತು ಜನರನ್ನು ಮಾತ್ರ ಟೆಸ್ಟ್ ಮಾಡಲು ಸೂಚಿಸಿದ್ದಾರೆ. ದಿನಕ್ಕೆ ‌ಸರದಿಯಂತೆ ಹತ್ತು ಮಂದಿಯನ್ನು ಮಾತ್ರ ಟೆಸ್ಟ್ ಮಾಡುತ್ತಾರಂತೆ.. ಹೀಗಾದ್ರೆ ಹೇಗೆ ನಮ್ಮ ಸ್ಥಿತಿ ಅಂತ ಪ್ರಶ್ನೆ ಮಾಡುತ್ತಾರೆ. ಉಳ್ಳಾಲ ಭಾಗದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವುದು ಈವರೆಗೂ ವಾರಿಯರ್ಸ್ ಆಗಿ ಕೆಲಸ ಮಾಡಿದ ಪೊಲೀಸರಲ್ಲಿ ಭಯ ಆವರಿಸುವಂತೆ ಮಾಡಿದೆ. ಮೂಲಗಳ ಪ್ರಕಾರ, ಒಂದಷ್ಟು ಮಂದಿ ಪೊಲೀಸರು ಇಂದು ರಾತ್ರಿ ಮನೆಗೆ ತೆರಳಿಲ್ಲ. ಠಾಣೆಯಲ್ಲಿ ಅಥವಾ ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

    ಅಧಿಕಾರಿಗಳು ರ್ಯಾಲಿಯಲ್ಲಿ ಬಿಝಿ!

    ಇದೇ ವೇಳೆ, ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಪೊಲೀಸ್ ನೇಮಕಾತಿ ಶಿಬಿರ ನಡೆಸಲಾಗ್ತಿದೆ. ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲಿ ಬಿಝಿಯಾಗಿದ್ದಾರೆ. ಕೊರೊನಾ ಸೋಂಕು ಭೀತಿ ಮೂಡಿಸುತ್ತಿರುವ ಈ ಸಂದರ್ಭದಲ್ಲಿ ಪೊಲೀಸ್ ನೇಮಕಾತಿ ಶಿಬಿರ ನಡೆಸಿದ್ದೇ ಸರಕಾರದ ನೀತಿ ಉಲ್ಲಂಘನೆ. ಶಿಬಿರದಲ್ಲಿ ಉತ್ತರ ಕರ್ನಾಟಕ ಮೂಲದ ಮುನ್ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಈ ಯುವಕರು ಕೊರೊನಾ ಹೊಂದಿಲ್ಲ ಎನ್ನುವ ಗ್ಯಾರಂಟಿ ಪೊಲೀಸರಿಗಿದೆಯೇ ಅನ್ನುವ ಪ್ರಶ್ನೆ ಎದುರಾಗಿದೆ. ಒಂದ್ಕಡೆ ವಾರಿಯರ್ಸ್ ಆಗಿರುವ ಪೊಲೀಸ್ ಪೇದೆಗಳೇ ಕೊರೊನಾ ಭೀತಿಯಲ್ಲಿದ್ದರೆ ಮಂಗಳೂರಿನ ಮತ್ತೊಂದೆಡೆ ರ್ಯಾಲಿ ನಡೆಸುತ್ತಿರುವುದು ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯಲು ಕಾರಣವಾಗುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply