ಮಂಗಳೂರು ಅಕ್ಟೋಬರ್ 31: ಮಂಗಳೂರು ನಗರದಲ್ಲಿ ಅತೀ ಹೆಚ್ಚು ನೋಪಾರ್ಕಿಂಗ್ ನಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದ್ದು, ಇದೀಗ ಪೊಲೀಸರು ನೋಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ದ ದಂಡ ವಿಧಿಸುತ್ತಿದ್ದಾರೆ. ವಾಹನ ನಿಲುಗಡೆ ಮಾಡಿದ್ದ ಮಾಲೀಕ, ಚಾಲಕರ ವಿರುದ್ಧ 4793 ಪ್ರಕರಣಗಳನ್ನು ದಾಖಲಿಸಿ ₹ 23,21,200 ದಂಡ ವಿಧಿಸಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಗರದ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಮೂರು ಮೂರು ತಿಂಗಳುಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ನೋ ಪಾರ್ಕಿಂಗ್, ಪಾದಚಾರಿ ಮಾರ್ಗದ ಮೇಲೆ ವಾಹನ ನಿಲುಗಡೆ ಸೇರಿದಂತೆ ಅನಧಿಕೃತವಾಗಿ ವಾಹನ ನಿಲುಗಡೆ ಮಾಡಿದ್ದ ಮಾಲೀಕ, ಚಾಲಕರ ವಿರುದ್ಧ 4793 ಪ್ರಕರಣಗಳನ್ನು ದಾಖಲಿಸಿ ₹ 23,21,200 ದಂಡ ವಿಧಿಸಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಹೇಳಿದರು. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ, ಹೆಚ್ಚು ಅಪಘಾತಗಳಾಗುವ ಬ್ಲ್ಯಾಕ್ ಸ್ಪಾಟ್ ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಂಡು 562 ಪ್ರಕರಣಗಳನ್ನು ದಾಖಲಿಸಿ ₹5.62 ಲಕ್ಷ ದಂಡ ವಿಧಿಸಲಾಗಿದೆ. ಟಿಂಟೆಡ್ ಗ್ಲಾಸ್ ಉಪಯೋಗಿಸಿದ 5865 ವಾಹನಗಳನ್ನು ಗುರುತಿಸಿ ₹24.85 ಲಕ್ಷ ದಂಡ ವಿಧಿಸಲಾಗಿದೆ ಎಂದರು.
ಇನ್ನು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 30ರ ನಡುವಿನ ಅವಧಿಯಲ್ಲಿ ಕಳ್ಳತನವಾಗಿದ್ದ 233 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡು ಅದರ ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್. ಎನ್ ತಿಳಿಸಿದ್ದಾರೆ.