Connect with us

    DAKSHINA KANNADA

    ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ, ಖಾಸಗಿ ಸಂಸ್ಥೆಯ ಆವರಣದಲ್ಲೂ ಮಿಂಚುತ್ತಿದೆ ಮಂಗಳೂರು ಸಿಟಿ ಪೋಲೀಸ್ ಬ್ಯಾರಿಕೇಡ್ ವೇಶ…

    ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ, ಖಾಸಗಿ ಸಂಸ್ಥೆಯ ಆವರಣದಲ್ಲೂ ಮಿಂಚುತ್ತಿದೆ ಮಂಗಳೂರು ಸಿಟಿ ಪೋಲೀಸ್ ಬ್ಯಾರಿಕೇಡ್ ವೇಶ…

    ಮಂಗಳೂರು, ಜೂನ್ 5: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಂಗಳೂರು ನಗರದ ಹೊರವಲಯದ ದೇರಳೆಕಟ್ಟೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ.

    ಅತ್ಯಾಧುನಿಕ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿ ಬೆಳೆಯುತ್ತಿರುವ ದೇರಳಕಟ್ಟೆಯಲ್ಲಿ ಈ ರೀತಿಯ ಟ್ರಾಫಿಕ್ ಸಮಸ್ಯೆಗೆ ಈ ಕೇಂದ್ರಗಳೇ ಕಾರಣ ಎನ್ನುವುದು ಮಾತ್ರ ನೂರಕ್ಕೆ ನೂರು ಸತ್ಯದ ಮಾತಾಗಿದೆ.

    ಗಗನ ಚುಂಬಿ ಕಟ್ಟಡವನ್ನು ಕಟ್ಟುತ್ತಿರುವ ಈ ಸಂಸ್ಥೆಗಳಿಗೆ ತಮ್ಮ ಬಳಿ ಬರುವ ವಾಹನಗಳಿಗೆ ನಿಲುಗಡೆ ಪ್ರದೇಶವನ್ನು ಮಾಡಲು ಬರವಿದೆ.

    ದೇರಳಕಟ್ಟೆಯ ಯೇನಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯದ್ದೂ ಇದೇ ಕಥೆಯಾಗಿದ್ದು, ಇಲ್ಲಿಗೆ ಬರುವ ರೋಗಿಗಳ ವಾಹನಗಳ ನಿಲುಗಡೆಗೆ ಆಸ್ಪತ್ರೆಯ ಆವರಣದ ಒಳಗೆ ನಿಲುಗಡೆಯ ವ್ಯವಸ್ಥೆಯನ್ನು ಮಾಡಿಲ್ಲ.

    ಆಸ್ಪತ್ರೆಯ ಒಳಗೆ ಬರುವ ಎಲ್ಲಾ ವಾಹನಗಳನ್ನು ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಗಳೇ ಹೊರಗೆ ಕಳುಹಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಿದ್ದಾರೆ.

    ನೂರಾರು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಈ ಸಂಸ್ಥೆಗೆ ತನ್ನ ಬಳಿ ಬರುವ ರೋಗಿಗಳು (ಗ್ರಾಹಕರಿಗೆ) ನಿಲುಗಡೆ ವ್ಯವಸ್ಥೆ ಕಲ್ಪಿಸಲು ಬರವಿದೆ.

    ಆಸ್ಪತ್ರೆ ವತಿಯಿಂದ ನೀಡುವ ಪಾಸ್ ಹೊಂದಿದ ವಾಹನಕ್ಕೆ ಮಾತ್ರ ಆಸ್ಪತ್ರೆಯ ಒಳಗಡೆ ವಾಹನ ನಿಲುಗಡೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

    ಒಂದು ವೇಳೆ ನಿಲುಗಡೆ ಪ್ರದೇಶದಲ್ಲಿ ಪಾಸ್ ಇಲ್ಲದೆ ವಾಹನ ನಿಲ್ಲಿಸಿದ್ದೇ ಆದಲ್ಲಿ ಅಂಥ ವಾಹನಗಳಿಗೆ ದಿನವೊಂದಕ್ಕೆ 500 ರೂಪಾಯಿಗಳ ದಂಡವನ್ನೂ ವಿಧಿಸುವ ನಿಯಮವೂ ಇಲ್ಲಿ ಜಾರಿಯಲ್ಲಿದೆ.

    ಕೇವಲ ಪಾಸ್ ಹೊಂದಿದ ವಾಹನಗಳಿಗೆ ಮಾತ್ರವೇ ನಿಲುಗಡೆಗೆ ಅವಕಾಶ ನೀಡುವ ಸಂಸ್ಥೆಯು ಕೇವಲ ಪಾಸ್ ಹೊಂದಿದವರಿಗೆ ಮಾತ್ರವೇ ಆಸ್ಪತ್ರೆಗೆ ಪ್ರವೇಶ ಎನ್ನುವ ಬೋರ್ಡನ್ನು ಯಾಕೆ ಹಾಕುತ್ತಿಲ್ಲ ಎನ್ನುವ ಪ್ರಶ್ನೆಯಿದೀಗ ಮೂಡಲಾರಂಭಿಸಿದೆ.

    ಅಲ್ಲದೆ ಈ ಆಸ್ಪತ್ರೆಯೊಳಗೆ ಬರುವ ವಾಹನ ಮಾಲಕರು ನಿಲುಗಡೆ ವಿಚಾರದಲ್ಲಿ ತಕರಾರು ಎತ್ತದಿರಲಿ ಎನ್ನುವ ಕಾರಣಕ್ಕೇನೋ, ಮಂಗಳೂರು ಸಿಟಿ ಪೋಲೀಸ್ ಎನ್ನುವ ಬರಹವುಳ್ಳ ಬ್ಯಾರಿಕೇಡ್ ಗಳನ್ನೂ ಆಸ್ಪತ್ರೆಯ ಆವರಣದ ಒಳಗೆಯೇ ಅಳವಡಿಸಲಾಗಿದೆ.

    ಖಾಸಗಿ ಸ್ಥಳದಲ್ಲಿ ಮಂಗಳೂರು ಸಿಟಿ ಪೋಲೀಸ್ ಎನ್ನುವ ಬ್ಯಾರಿಕೇಡ್ ಅಳವಡಿಸಲು ಪರವಾನಗಿಯನ್ನು ಈ ಸಂಸ್ಥೆಗೆ ನೀಡಿದವರು ಯಾರು ಎನ್ನುವ ಗೊಂದಲವೂ ಇದೀಗ ಮೂಡಲಾರಂಭಿಸಿದೆ.

    ಆಸ್ಪತ್ರೆಗೆ ರೋಗಿಗಳು ಹೆಚ್ಚು ಬಂದಷ್ಟೂ ಸಂಸ್ಥೆಗೆ ಆದಾಯ ಹೆಚ್ಚಾಗುತ್ತಿದ್ದು, ಆದಾಯ ಸಂಸ್ಥೆಗೆ ಹೊರೆ ಸಾರ್ವಜನಿಕರಿಗೆ ಅನ್ನೋ ಪಾಲಿಸಿಯನ್ನು ಸಂಸ್ಥೆ ಇದೀಗ ಜಾರಿಗೆ ತಂದಂತಿದೆ.

    ಈ ಆಸ್ಪತ್ರೆಗೆ ಬರುವ ವಾಹನಗಳು ರಸ್ತೆಯ ಅಕ್ಕಪಕ್ಕದಲ್ಲಿ ಎಲ್ಲೆಂದರಲ್ಲಿ ಪಾರ್ಕ್ ಮಾಡುವುದರಿಂದಾಗಿ ಇದೀಗ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ರಸ್ತೆಯೇ ಇಲ್ಲದಂತಾಗಿದೆ.

    ಯೇನಪೋಯ ಆಸ್ಪತ್ರೆಯ ಪಕ್ಕದಲ್ಲೇ ಕುಂಪಲ ಸಂಪರ್ಕಿಸುವ ರಸ್ತೆಯ ಪಾಡಂತೂ ಹೇಳ ತೀರದಂತಾಗಿದೆ.

    ಈ ರಸ್ತೆಯ ಎರಡೂ ಕಡೆಗಳಲ್ಲಿ ಆಸ್ಪತ್ರೆಗೆ ಬಂದವರ, ಆಸ್ಪತ್ರೆ ಸಿಬ್ಬಂದಿಗಳ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದ್ದು, ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ರಸ್ತೆಯೇ ಇಲ್ಲದಂತಹ ಸ್ಥಿತಿಯಿದೆ.

    ತನ್ನ ಆವರಣದೊಳಗೆ ನಿಲುಗಡೆಗೊಳಿಸುವ ವಾಹನಗಳಿಗೆ 500 ರೂಪಾಯಿಗಳ ದಂಡ ವಿಧಿಸುವ ಯೇನಪೋಯ ಸಂಸ್ಥೆಗೆ ಸೇರಿದ ಹಾಗೂ ಸಂಸ್ಥೆಗೆ ಆದಾಯ ತರುವ ವಾಹನಗಳು ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ನಿಲ್ಲಿಸುವುದಕ್ಕೆ ಸ್ಥಳೀಯ ಗ್ರಾಮಪಂಚಾಯತ್ ಎಷ್ಟು ದಂಡ ವಿಧಿಸುತ್ತಿದೆ ಎನ್ನುವುದನ್ನು ಸ್ಥಳಿಯಾಡಳಿತ ಬಹಿರಂಗಪಡಿಸಬೇಕಿದೆ.

    ಈವರೆಗೆ ವಿಧಿಸದೇ ಇದ್ದಲ್ಲಿ ಇನ್ನಾದರೂ ಈ ಬಗ್ಗೆ ಗಮನ ಹರಿಸಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply