ಲಂಗು ಲಗಾಮಿಲ್ಲದೆ ಓಡಾಡುವ ಸಿಟಿ ಬಸ್ ಗಳ ಮೇಲೆ ಯಾಕಿಲ್ಲ ಕಡಿವಾಣ ?

ಮಂಗಳೂರು, ಜುಲೈ 12: ಅತೀ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿಗೆ ದೂರದೂರುಗಳಿಂದ ಸಂಪರ್ಕ ಕಲ್ಲಿಸಲು ಸಿಟಿ ಬಸ್ ಗಳ ಕಾರ್ಯಾಚರಣೆ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ.

ಸುಮಾರು 60 ಕಡೆಗಳಿಂದ ಮಂಗಳೂರಿಗೆ ಜನರನ್ನು ಕರೆತಂದು, ಬಿಡುವ ಪ್ರಕ್ರಿಯೆಯಲ್ಲಿ ಈ ಸಿಟಿ ಬಸ್ ಗಳು ನಿರತವಾಗಿದ್ದು, ಉತ್ತಮ ಸೇವೆಯನ್ನೂ ನೀಡುತ್ತಾ ಬಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ಸಿಟಿ ಬಸ್ ಗಳು ಇತರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ವಿಪರೀತ ತೊಂದರೆ ಕೊಡಲಾರಂಭಿಸಿದೆ.

ನಗರ ಮಧ್ಯೆ ವಾಹನಗಳು 30 ಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸುವಂತಿಲ್ಲ ಎನ್ನುವ ನಿಯಮವಿದ್ದರೂ, ಸಿಟಿ ಬಸ್ ಚಾಲಕರಿಗೆ ಮಾತ್ರ ಈ ನಿಯಮ ಅನ್ವಯಿಸುವುದಿಲ್ಲ.

ಸಿಕ್ಕ ಸಿಕ್ಕಲ್ಲಿ ನುಗ್ಗಿಸುವ, ದ್ವಿಚಕ್ರ ವಾಹನ ಚಾಲಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಚಾಲನೆ ಮಾಡುವುದು ಇದೀಗ ಸಾಮಾನ್ಯವಾಗಿದ್ದು, ಈ ಬಸ್ ಗಳ ಮೇಲೆ ಪೋಲೀಸರು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಇದೀಗ ಕೇಳಿ ಬರಲಾರಂಭಿಸಿದೆ.

ಟೈಮಿಂಗ್ ನೆಪದಲ್ಲಿ ಮಿತಿ ಮೀರಿದ ವೇಗದಲ್ಲಿ ಸಂಚರಿಸುವ ಈ ಬಸ್ ಗಳು, ಕರ್ಕಶ ಹಾರ್ನ್ ಮೂಲಕ ರಸ್ತೆಯಲ್ಲಿ ಸಂಚರಿಸುವ ಇತರೇ ವಾಹನಗಳಿಗೆ ಕಿರಿಕಿರಿಯುಂಟು ಮಾಡುತ್ತಿದೆ.

ಅಲ್ಲದೆ ಎಕ್ಸ್ ಪ್ರೆಸ್ ಎನ್ನುವ ಬೋರ್ಡ್ ಹಾಕಿಕೊಂಡು ಕೆಲವು ಬಸ್ ಚಾಲಕ ಮೈ ಮೇಲೆ ದೈವ ಹಿಡಿದವರಂತೆ ಬಸ್ ಚಲಾಯಿಸುತ್ತಿದ್ದು, ಹಲವು ದ್ವಿಚಕ್ರ ವಾಹನಗಳಿಗೆ ಹಾಗೂ ಲಘು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಉದಾಹರಣೆಗಳೂ ಇವೆ.

ಎಕ್ಸ್ ಪ್ರೆಸ್ ಎಂದು ಲಂಗು ಲಗಾಮಿಲ್ಲದೆ, ರಸ್ತೆ ಮಧ್ಯದಲ್ಲೇ ನಿಲ್ಲಿಸುತ್ತಿರುವ ಪ್ರಕ್ರಿಯೆಗಳು ಪೋಲೀಸರ ಎದುರಿಗೇ ನಡೆಯುತ್ತಿದೆ.

ಬೆಂದೂರ್ ವೆಲ್ ನಲ್ಲಿ ಬಸ್ ನಿಲ್ಲಿಸಲು ಬಸ್ ಬೇ ನಿರ್ಮಿಸಲಾಗಿದ್ದರೂ, ಎಲ್ಲಾ ಬಸ್ ಗಳೂ ರಸ್ತೆ ಮಧ್ಯದಲ್ಲೇ ನಿಲ್ಲುತ್ತಿದ್ದು, ಪೋಲೀಸರು ಎಷ್ಟೇ ಕೇಸ್ ಹಾಕಿದರೂ ಈ ಬಸ್ ಚಾಲಕರಿಗೆ ಬುದ್ಧಿ ಬಂದಿಲ್ಲ.

ಪೋಲೀಸರು ಕಟ್ಟು ನಿಟ್ಟಾಗಿ ಈ ಬಸ್ ಗಳನ್ನು ಬಸ್ ಬೇ ಗಳಲ್ಲೇ ನಿಲ್ಲಿಸುವ ಪ್ರಯತ್ನ ನಡೆಸಿದ್ದೇ ಆದಲ್ಲಿ ಮಂಗಳೂರಿನಲ್ಲಿ ಉಂಟಾಗುವ ಅರ್ಧದಷ್ಟು ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಸಬಹುದಾಗಿದೆ.

ಜ್ಯೋತಿ ಬಸ್ ನಿಲ್ದಾಣದ ಬಳಿಯೂ ಇಂಥಹುದೇ ಅವಾಂತರವಾಗಿದ್ದು, ಬಸ್ ಗಳ ಟೈ ಕೀಪರ್ ಗಳನ್ನು ಬಸ್ ಗಳನ್ನು ರಸ್ತೆಯಲ್ಲೇ ನಿಲ್ಲಿಸುವ ಕಾರಣ ಜ್ಯೋತಿ ಭಾಗದಲ್ಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಮಂಗಳೂರು ಪೋಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಈ ಬಗ್ಗೆ ಗಮನಹರಿಸಬೇಕಿದೆ.

ಬಸ್ ಚಾಲಕರಿಗೆ , ಟೈಂ ಕೀಪರ್ ಗಳಿಗೆ ಸೂಕ್ತ ಎಚ್ಚರಿಕೆಯನ್ನು ನೀಡುವ ಮೂಲಕ ನಿಯಮ ಪಾಲಿಸುವಂತೆ ಆದೇಶಿಸಬೇಕಿದೆ.

9 Shares

Facebook Comments

comments