ಬೆಂಗಳೂರು: ನವಿಲು ಗರಿಗಳನ್ನು ಬಳಸಿ ಚಿತ್ರೀಕರಿಸಿದ್ದ ‘ಹೇ ನವಿಲೇ’ ಇನ್ಸ್ಟಾಗ್ರಾಮ್ ರೀಲ್ಸ್ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ನಿವೇದಿತಾ ಗೌಡ ಮತ್ತು ಕಿಶನ್ ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ಅರಣ್ಯ ಇಲಾಖೆ ನೋಟಿಸ್ ನೀಡಿದ ಬಳಿಕ ಇಬ್ಬರೂ ವಿವಾದಿತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿ, ಪ್ರತ್ಯೇಕ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ನಿವೇದಿತಾ ಗೌಡ ಹಾಗೂ ಕಿಶನ್ ಒಟ್ಟಾಗಿ ‘ಹೇ ನವಿಲೇ’ ಹಾಡಿಗೆ ನವಿಲು ಗರಿಗಳನ್ನು ಧರಿಸಿ ನೃತ್ಯ ಮಾಡುವ ಮೂಲಕ ಕೊಲಾಬರೇಷನ್ ರೀಲ್ಸ್ ಮಾಡಿದ್ದರು. ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ವಿಶೇಷ ರಕ್ಷಣೆ ಹೊಂದಿದೆ. ಹೀಗಾಗಿ ನವಿಲು ಗರಿಗಳನ್ನು ಸಂಗ್ರಹಿಸುವುದು, ಪ್ರದರ್ಶಿಸುವುದು ಹಾಗೂ ವಾಣಿಜ್ಯ ಮತ್ತು ಪ್ರಚಾರದ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

ವಿವಾದದ ಕುರಿತು ವಿಡಿಯೋ ಸಂದೇಶ ಹಂಚಿಕೊಂಡಿರುವ ನಿವೇದಿತಾ ಗೌಡ, “ವನ್ಯಜೀವಿಗಳ ವಸ್ತುಗಳನ್ನು ಅಥವಾ ಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಅದರಿಂದ ವಿಡಿಯೋ ಮಾಡುವುದು ಕಾನೂನುಬಾಹಿರ ಎಂಬ ಅರಿವು ನಮಗಿರಲಿಲ್ಲ. ಸಾರ್ವಜನಿಕರು ಯಾರೂ ಕೂಡ ಈ ರೀತಿಯ ವನ್ಯಜೀವಿ ವಸ್ತುಗಳನ್ನು ಬಳಸಿ ವಿಡಿಯೋ ಮಾಡಬೇಡಿ” ಎಂದು ವಿನಂತಿಸಿದ್ದಾರೆ. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ನಡೆಸುತ್ತಿರುವ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಯಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮತ್ತೊಬ್ಬ ಬಿಗ್ಬಾಸ್ ಸ್ಪರ್ಧಿ ಕಿಶನ್, “ಹಲವು ತಂಡಗಳು ಸೇರಿ ಈ ಕೊಲಾಬರೇಷನ್ ವಿಡಿಯೋ ಮಾಡಿದ್ದೆವು. ವಿಡಿಯೋಗೆ ಬಳಸಿದ ನವಿಲು ಗರಿಗಳನ್ನು ಕಾಸ್ಟ್ಯೂಮ್ ಡಿಸೈನರ್ಗಳಿಂದ ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಇದು ಕಾನೂನುಬಾಹಿರ ಎಂಬ ಮಾಹಿತಿ ನಮಗಿರಲಿಲ್ಲ. ಒಬ್ಬ ಜವಾಬ್ದಾರಿಯುತ ಇನ್ಫ್ಲುಯೆನ್ಸರ್ ಆಗಿ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ವಿಡಿಯೋ ಅಳಿಸಿದ್ದೇನೆ” ಎಂದು ಹೇಳಿದ್ದಾರೆ. ಸೆಲೆಬ್ರಿಟಿಗಳ ಈ ನಡೆ ಸೋಷಿಯಲ್ ಮೀಡಿಯಾದಲ್ಲಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.