ಮಂಗಳೂರು ಎಪ್ರಿಲ್ 09: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸುರತ್ಕಲ್ನ ಮಾಜಿ ರಿಜಿಸ್ಟ್ರಾರ್ ರವೀಂದ್ರನಾಥ್ ಕೆ. ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಆಡಳಿತಾತ್ಮಕ ಅಕ್ರಮಗಳು ಮತ್ತು ವೃತ್ತಿಪರ ನಡವಳಿಕೆಯ ಉಲ್ಲಂಘನೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು ಈ ಕಠಿಣ ನಿರ್ಧಾರ ಕೈಗೊಂಡಿದೆ.

ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ 2025ರ ಸೆಪ್ಟೆಂಬರ್ 12ರಿಂದಲೇ ರವೀಂದ್ರನಾಥ್ ಅವರನ್ನು ಅಮಾನತುಗೊಳಿಸಲಾಗಿತ್ತು. ಕೇಂದ್ರ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆ ಹಾಗೂ ಕಾರ್ಯವಿಧಾನದ ಲೋಪಗಳ ಕುರಿತು ನಡೆದ ಸುದೀರ್ಘ ಇಲಾಖಾ ತನಿಖೆಯಲ್ಲಿ ಅವರ ಮೇಲಿನ ಗಂಭೀರ ಆರೋಪಗಳು ಪತ್ತೆಯಾಗಿವೆ. ಆಡಳಿತ ಮಂಡಳಿಯು ಏಕಾನುಮತದಿಂದ ಈ ಶಿಕ್ಷೆಯನ್ನು ಅನುಮೋದಿಸಿದೆ.
“ಸಂಸ್ಥೆಯು ಯಾವುದೇ ರೀತಿಯ ಅಕ್ರಮ ಅಥವಾ ಅನೈತಿಕ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ (Zero-Tolerance) ನೀತಿಯನ್ನು ಹೊಂದಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ,” ಎಂದು ಸಂಸ್ಥೆ ಈ ಮೂಲಕ ಸ್ಪಷ್ಟಪಡಿಸಿದೆ. 5 ವರ್ಷಗಳ ಕಾಲಮಿತಿ ನಿಯಮದಡಿ ಈಗಾಗಲೇ ಅವರ ಅವಧಿ ಮುಕ್ತಾಯಗೊಂಡಿದ್ದರೂ, ಈಗ ಅಧಿಕೃತವಾಗಿ ಸೇವೆಯಿಂದಲೇ ವಜಾ ಮಾಡಲಾಗಿದೆ.