ಮುಂಬೈ ಫೆಬ್ರವರಿ 24: ಅಮೇರಿಕಾದ ಸುಪ್ರೀಂಕೋರ್ಟ್ ಆದೇಶದ ಬಳಿಕವೂ ಮತ್ತೆ ಟ್ರಂಪ್ ಸುಂಕದ ಬೆದರಿಕೆ ಹಾಕಿದ್ದು, ಇದೀಗ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 1 ರಷ್ಟು ಕುಸಿತ ಕಂಡಿದೆ.

ಟ್ರಂಪ್ ಹೇಳಿಕೆ ಹಾಗೂ ಇರಾನ್ ಯುದ್ದದ ಭೀತಿ ಇದ್ದು, ಷೇರು ಮಾರುಕಟ್ಟೆಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಹೂಡಿಕೆದಾರರು ಷೇರಗಳ ಮಾರಾಟದಲ್ಲಿ ತೊಡಗಿದ್ದಾರೆ. ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ತೀರ್ಪು ನೀಡಿದರೂ ಟ್ರಂಪ್ ಅವರ ಟ್ಯಾರಿಫ್ ಕಿರಿಕ್ ಕಡಿಮೆ ಆಗಿಲ್ಲ. ಟ್ರಂಪ್ ಅವರ ಟ್ಯಾರಿಫ್ ಕ್ರಮವನ್ನು ಕೋರ್ಟ್ ಅಮಾನ್ಯಗೊಳಿಸಿ, ಎಲ್ಲಾ ದೇಶಗಳಿಗೂ ಟ್ಯಾರಿಫ್ ಅನ್ನು ಸಮಾನವಾಗಿ ಶೇ. 10ಕ್ಕೆ ಇಳಿಸಿತ್ತು. ಆದರೆ, ಟ್ರಂಪ್ ಅವರು ಟ್ರೇಡ್ ಎಕ್ಸ್ಪ್ಯಾನ್ಷನ್ ಆ್ಯಕ್ಟ್ನ 232 ಸೆಕ್ಷನ್ ಬಳಸಿ ಟ್ಯಾರಿಫ್ ಅನ್ನು ಮತ್ತೆ ಹಾಕಲು ಹೊರಟಿದ್ದಾರೆ. ಕೋರ್ಟ್ ತಾಳಕ್ಕೆ ಕುಣಿದರೆ ಸಿಕ್ಕಾಪಟ್ಟೆ ಟ್ಯಾರಿಫ್ ಹಾಕುವುದಾಗಿ ಎಲ್ಲಾ ದೇಶಗಳಿಗೂ ಎಚ್ಚರಿಕೆ ಕೊಟ್ಟಿದ್ದಾರೆ ಟ್ರಂಪ್. ಈ ಕಾರಣಕ್ಕೆ ಮಾರುಕಟ್ಟೆ ನೆಗಟಿವ್ ಆಗಿ ಸ್ಪಂದಿಸುತ್ತಿದೆ.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 813.13 ಅಂಶಗಳಷ್ಟು, ಅಂದರೆ ಶೇ 0.97 ರಷ್ಟು ಕುಸಿದು 82,481.53ರಲ್ಲಿ ವಹಿವಾಟು ಆರಂಭಿಸಿತ್ತು. 50-ಷೇರುಗಳ ಎನ್ಎಸ್ಇ ನಿಫ್ಟಿ 230.15 ಅಂಶ ಅಥವಾ ಶೇ 0.89 ರಷ್ಟು ಕುಸಿದು 25,482.85ರಲ್ಲಿ ವಹಿವಾಟು ಆರಂಭಿಸಿತ್ತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಮಾಡಲಿರುವ ಭಾಷಣದ ಬಗ್ಗೆ ಜಾಗತಿಕವಾಗಿ ಹೂಡಿಕೆದಾರರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಐರೋಪ್ಯ ಒಕ್ಕೂಟ, ಬ್ರಿಟನ್ನಂತಹ ಜಾಗತಿಕ ಮಿತ್ರರಾಷ್ಟ್ರಗಳು ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದಗಳ ಮರುಪರಾಮರ್ಶೆಗೆ ಮುಂದಾಗಿವೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಭಾರಿ ಸುಂಕ ಏರಿಕೆಯ ಬೆದರಿಕೆ ಹಾಕಿದ್ದಾರೆ. ಇದೂ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ತಜ್ಞರು. ಭಾರತವೂ ಸಹ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿತ್ತು.